Hubballi : ಆಟವಾಡಲು ತೆರಳಿದ್ದ ಬಾಲಕ ಗುಂಡಿಯಲ್ಲಿ ಬಿದ್ದು ಸಾವು

ಹುಬ್ಬಳ್ಳಿ: ಸ್ನೇಹಿತರೊಂದಿಗೆ ಆಟವಾಡಲು ತೆರಳಿದ್ದ 9 ವರ್ಷದ ಬಾಲಕನೋರ್ವ ಗುಂಡಿಯಲ್ಲಿ ಬಿದ್ದು ಮೃತಪಟ್ಟ ಘಟನೆ ನಗರದ ವಿಜಯನಗರ ಪ್ರದೇಶದಲ್ಲಿ ನಡೆದಿದೆ.
ಮೃತ ಬಾಲಕನನ್ನು ಕೇಶ್ವಾಪುರದ ಆಜಾದ್ ನಗರದ ನಿವಾಸಿ ಬಾಲಾಜಿ ಎಂದು ಗುರುತಿಸಲಾಗಿದೆ.
ಬಾಲಾಜಿ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಾ ವಿಜಯನಗರ ಪ್ರದೇಶಕ್ಕೆ ತೆರಳಿದ್ದ ವೇಳೆ, ಬಿದ್ದಿದ್ದ ತೆಂಗಿನಕಾಯಿಯನ್ನು ತೆಗೆಯಲು ಕಾಂಪೌಂಡ್ ಒಳಗೆ ಹೋಗಿದ್ದಾನೆ. ಈ ಸಂದರ್ಭ ಪಿಲ್ಲರ್ ನಿರ್ಮಾಣಕ್ಕಾಗಿ ತೋಡಿದ್ದ ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ವೇಳೆ ಬಾಲಾಜಿಯೊಂದಿಗೆ ಇದ್ದ ಇಬ್ಬರು ಬಾಲಕರು ಭಯಗೊಂಡು ಯಾರಿಗೂ ವಿಷಯ ತಿಳಿಸದೆ ಮೌನವಾಗಿದ್ದರು ಎನ್ನಲಾಗಿದೆ. ಬಾಲಾಜಿ ಮನೆಗೆ ವಾಪಸ್ ಬಾರದೆ ಇದ್ದುದನ್ನು ಗಮನಿಸಿದ ಕುಟುಂಬಸ್ಥರು ಹುಡುಕಾಟ ನಡೆಸಿ, ಬಳಿಕ ಆತ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ಪಾಲಕರ ದೂರಿನ ಮೇರೆಗೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಹುಡುಕಾಟ ನಡೆಸಿದಾಗ, ಬಾಲಾಜಿಯ ಮೃತದೇಹ ಪತ್ತೆಯಾಗಿದೆ.
ಈ ಸಂಬಂಧ ಹುಬ್ಬಳ್ಳಿಯ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






