Hubballi | ಬ್ಯಾಹಟ್ಟಿ, ಸುಳ್ಳ ಗ್ರಾಮಗಳಲ್ಲಿ ಬೆಳಗಿನ ಜಾವವೇ ATMಗಳಿಗೆ ಕನ್ನ; 14 ಲಕ್ಷಕ್ಕೂ ಅಧಿಕ ಹಣ ದೋಚಿ ಪರಾರಿ

ಹುಬ್ಬಳ್ಳಿ : ಸಿನಿಮಾ ಶೈಲಿಯಲ್ಲಿ ಎರಡು ಎಟಿಎಂಗಳಲ್ಲಿನ ನಗದು ದೋಚಿದ ಘಟನೆ ಹುಬ್ಬಳ್ಳಿ ಸಮೀಪದ ಸುಳ್ಳ ಹಾಗೂ ಬ್ಯಾಹಟ್ಟಿ ಗ್ರಾಮಗಳಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.
ಜನರ ಓಡಾಟ ಇರುವ ಗ್ರಾಮಗಳಲ್ಲೇ ಎಟಿಎಂಗಳನ್ನು ಗುರಿಯಾಗಿಸಿಕೊಂಡು ಕಳ್ಳರು ಕೈಚಳಕ ತೋರಿಸಿದ್ದು, ಎರಡೂ ಎಟಿಎಂಗಳಿಂದ 14 ಲಕ್ಷಕ್ಕೂ ಅಧಿಕ ಹಣ ಕಳ್ಳತನ ಮಾಡಲಾಗಿದೆ ಎನ್ನಲಾಗಿದೆ. ಗ್ರಾಮದ ಮಧ್ಯದಲ್ಲೇ ಇಂತಹ ಘಟನೆ ನಡೆದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಬ್ಯಾಹಟ್ಟಿ ಗ್ರಾಮದಲ್ಲಿ ಗುರುವಾರ ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಎಟಿಎಂಗೆ ನುಗ್ಗಿದ ದುಷ್ಕರ್ಮಿಗಳು, ಶೆಟರ್‌ನ ಲಾಕ್ ಮುರಿದು ಒಳಪ್ರವೇಶಿಸಿದ್ದಾರೆ. ಬಳಿಕ ಎಟಿಎಂನಲ್ಲಿದ್ದ 3 ಲಕ್ಷಕ್ಕೂ ಅಧಿಕ ನಗದನ್ನು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಅಲ್ಲದೆ, ಎಟಿಎಂ ಒಳ ಹಾಗೂ ಹೊರಭಾಗದಲ್ಲಿದ್ದ ಬಹುತೇಕ ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿದ್ದಾರೆ.
ಇದೇ ರೀತಿ ಸುಳ್ಳ ಗ್ರಾಮದಲ್ಲಿಯೂ ಎಟಿಎಂಗೆ ಕನ್ನ ಹಾಕಲಾಗಿದೆ. ಸುಳ್ಳ ಗ್ರಾಮದ ಎಟಿಎಂ ನಡು ಊರಿನಲ್ಲಿದ್ದು, ಜನವಸತಿ ಪ್ರದೇಶದಲ್ಲೇ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ಎರಡೂ ಪ್ರಕರಣಗಳ ಮಾಹಿತಿ ತಿಳಿಯುತ್ತಿದ್ದಂತೆ ಡಿಎಸ್ಪಿ ವಿನೋದ ಮುಕ್ತೇದಾರ, ಇನ್ಸ್ ಪೆಕ್ಟರ್ ಮುರಗೇಶ ಚೆನ್ನಣ್ಣ ಅವರ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಎರಡು ಗ್ರಾಮಗಳಲ್ಲಿ ಒಂದೇ ರೀತಿಯ ಕೃತ್ಯ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಒಂದೇ ತಂಡ ಎರಡೂ ಕಡೆಗಳಲ್ಲಿ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ.






