ಹುಬ್ಬಳ್ಳಿಯ ಮರ್ಯಾದೆ ಹತ್ಯೆ ಪ್ರಕರಣ ಅಮಾನವೀಯ: ಸಚಿವ ಸಂತೋಷ್ ಲಾಡ್

PC | X@SantoshSLadINC
ಹುಬ್ಬಳ್ಳಿ: ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆ ಹತ್ಯೆ ಪ್ರಕರಣವು ಅತ್ಯಂತ ಅಮಾನವೀಯ ಘಟನೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಗಾಯಾಳುಗಳನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸ್ವಾತಂತ್ರ್ಯ ಸಿಕ್ಕು 80 ವರ್ಷಗಳಾದರೂ ನಾವು ಇನ್ನೂ ಜಾತಿ ವ್ಯವಸ್ಥೆಯಲ್ಲೇ ಬದುಕುತ್ತಿರುವುದು ದುಃಖಕರ. ಸಮಾಜದಲ್ಲಿ ಸಮಾನತೆ ಹಾಗೂ ಮನುಷ್ಯತ್ವ ಮೇಲುಗೈ ಸಾಧಿಸಬೇಕಿದೆ” ಎಂದು ಹೇಳಿದರು.
ಘಟನೆಯ ಬಳಿಕ ಜಿಲ್ಲಾಡಳಿತ ಹಾಗೂ ವೈದ್ಯರು ತಕ್ಷಣ ಸ್ಪಂದಿಸಿ ಗಾಯಾಳುಗಳ ಜೀವ ಉಳಿಸುವ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಪೊಲೀಸರು ಸರಿಯಾದ ಸಮಯಕ್ಕೆ ಸ್ಥಳಕ್ಕೆ ತೆರಳಿದ ಕಾರಣ ದೊಡ್ಡ ಅನಾಹುತ ತಪ್ಪಿದೆ ಎಂದರು.
“ನಮ್ಮ ಸರ್ಕಾರದ ವತಿಯಿಂದ ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇವೆ. ಎಸ್ಪಿ, ಡಿಸಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇಡೀ ಸರ್ಕಾರ ನೊಂದ ಕುಟುಂಬದ ಜೊತೆ ನಿಂತಿದೆ” ಎಂದು ಭರವಸೆ ನೀಡಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಪಿಡಿಒ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ ಅವರು, “ಯಾವುದೇ ಇಲಾಖೆ ಸರಿಯಾಗಿ ಸ್ಪಂದಿಸದೇ ಇದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” ಎಂದರು.
ಗ್ರಾಮಕ್ಕೆ ಸ್ವತಃ ಭೇಟಿ ನೀಡಿ ಗ್ರಾಮಸ್ಥರಿಗೆ ಕೌನ್ಸೆಲಿಂಗ್ ನೀಡಲಾಗುವುದು ಎಂದು ತಿಳಿಸಿದ ಸಚಿವರು, ಸರ್ಕಾರದ ವತಿಯಿಂದ ಮಾಡಬೇಕಾದ ಎಲ್ಲಾ ನೆರವು ನೀಡಲಾಗುವುದು ಎಂದು ಹೇಳಿದರು.
“ಯುವಕನ ಕುಟುಂಬಕ್ಕೆ ಯಾರೂ ಸಹಾಯಕ್ಕೆ ಬಂದಿಲ್ಲ ಎಂಬ ಮಾಹಿತಿ ಇದೆ. ಇದು ಒಂದು ರೀತಿಯ ಸಾಮಾಜಿಕ ಬಹಿಷ್ಕಾರದಂತಿದೆ. ಇಡೀ ಸರ್ಕಾರ ಯುವಕನ ಕುಟುಂಬದ ಜೊತೆಗಿದೆ” ಎಂದು ಸಂತೋಷ್ ಲಾಡ್ ಸ್ಪಷ್ಟಪಡಿಸಿದರು.







