ಹುಬ್ಬಳ್ಳಿ: ಯೂಟ್ಯೂಬರ್ ಮುಕುಳೆಪ್ಪ ವಿರುದ್ಧ ಅಪಹರಣ ಪ್ರಕರಣ; ವಿಚಾರಣೆ

ಹುಬ್ಬಳ್ಳಿ: ಯೂಟ್ಯೂಬರ್ ಮುಕುಳೆಪ್ಪ ವಿರುದ್ಧ ದಾಖಲಾಗಿದ್ದ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ, ಅವರ ಪತ್ನಿ ಗಾಯತ್ರಿ ಅವರನ್ನು ಸೋಮವಾರ ವಿದ್ಯಾನಗರ ಠಾಣೆಯಲ್ಲಿ ವಿಚಾರಣೆ ನಡೆಸಲಾಯಿತು.
ಮುಕುಳೆಪ್ಪ ವಿರುದ್ಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಅಪಹರಣ ಮತ್ತು ಜೀವ ಬೆದರಿಕೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವಿಜಯಲಕ್ಷ್ಮಿ ಪಾಟೀಲ್ ಸಮ್ಮುಖದಲ್ಲಿ ಪೊಲೀಸರು ವಿಚಾರಣೆ ನಡೆಸಿದರು.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಹು-ಧಾ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಅವರು “ ಗಾಯತ್ರಿ ಎನ್ನುವ ಯುವತಿಯ ತಂದೆ-ತಾಯಿ ದೂರು ಇದೇ ಸೆ. 20ರಂದು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ರು. ನಮ್ಮ ಮಗಳನ್ನ ಬಲವಂತವಾಗಿ ಮದುವೆ ಆಗಿದ್ದಾನೆ. ಅಪಹರಣ ಮಾಡಿಕೊಂಡು ಹೋಗಿದ್ದಾನೆ, ನಮ್ಮ ಮಗಳನ್ನ ನಮಗೆ ಕೊಡಿಸಿ ಅಂತಾ ದೂರಿನಲ್ಲಿ ತಿಳಿಸಿದ್ದರು. ಅದರನ್ವಯ ಪ್ರಕರಣ ದಾಖಲಿಸಿ ಯುವತಿಯನ್ನ ಹುಡುಕುವ ಹಾಗೂ ಆರೋಪಿ ಪತ್ತೆಗೆ ಜಾಲ ಬೀಸಿದ್ದೆವು” ಎಂದರು.
ಇಂದು ವಿದ್ಯಾನಗರ ಪೊಲೀಸ್ ಠಾಣೆಗೆ ತಮ್ಮ ವಕೀಲರ ಜೊತೆಗೆ ಬಂದ ಗಾಯತ್ರಿ,” ನಾನು ಸ್ವಇಚ್ಛೆಯಿಂದ ಜೂನ್ 5 ರಂದು ಮದುವೆ ಆಗಿದ್ದೇನೆ. ಮದುವೆ ನಂತರ ನನ್ನ ತಾಯಿಯ ಮನೆಗೂ ಹೋಗಿದ್ದೇನೆ. ಎಲ್ಲರಿಗೂ ವಿಷಯ ಗೊತ್ತು, ಅವರ ಅನುಮತಿಯಿಂದಲೇ ಮದುವೆ ಆಗಿದ್ದೇನೆ. ಯಾರೋ ಸುಳ್ಳು ಆರೋಪ ಮಾಡ್ತಾ ಇದ್ದಾರೆ. ಯಾವುದೇ ಬಲವಂತ, ಅಪಹರಣ ಆಗಿಲ್ಲ ಅಂತಾ ಹೇಳಿಕೆ ನೀಡಿದ್ದಾರೆ” ಎಂದು ತಿಳಿಸಿದರು.
ಪ್ರಕರಣದ ತನಿಖೆ ಮುಂದುವರೆದಿದೆ. ಮಹಿಳಾ ಮತ್ತು ಮಕ್ಕಳ ಅಧಿಕಾರಿಗಳು ಸಹ ತನಿಖೆಯಲ್ಲಿ ಭಾಗಿಯಾಗಿದ್ದಾರೆ. ಗಾಯತ್ರಿಯ ತಂದೆ-ತಾಯಿ ಬರ್ತೇವೆ ಅಂತಾ ಹೇಳಿದ್ದಾರಂತೆ. ಆಕೆ ಸಾಂತ್ವನ ಕೇಂದ್ರಕ್ಕೆ ಹೋಗ್ತೀನಿ ಅಂದ್ರೆ ಅಲ್ಲಿಗೆ ಕಳಿಸಬಹುದು. ಈ ಬಗ್ಗೆ ಆಕೆ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು ನಿರ್ಧಾರ ಕೈಗೊಳ್ಳಬೇಕು” ಎಂದು ಮಾಹಿತಿ ನೀಡಿದರು.
ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಗಾಯತ್ರಿ, ‘ಎರಡು ವರ್ಷಗಳಿಂದ ನಾವು ಪ್ರೀತಿಸುತ್ತಿದ್ದು, ಎರಡು ತಿಂಗಳ ಹಿಂದೆ ಸ್ವ ಇಚ್ಛೆಯಿಂದ ಅವರನ್ನು ಮದುವೆಯಾಗಿದ್ದೇನೆ. ಅಪ್ಪ–ಅಮ್ಮನಿಗೂ ಇದು ತಿಳಿದಿದ್ದು, ಅವರ ಒಪ್ಪಿಗೆಯೂ ಇತ್ತು’ ಎಂದರು.







