Hubballi | ನೂತನ ಕಮಿಷನರ್ ಗೆ ಗೌರಿ ಲಂಕೇಶ್ ಹತ್ಯೆ ಆರೋಪಿಯಿಂದ ಸನ್ಮಾನ : ಫೋಟೋ ವೈರಲ್

ಆರೋಪಿ ಖೇತ್ಸಿಂಗ್ ರಾಜಪುರೋಹಿತ್ ಹಾಗೂ ಅಮಿತ್ ಬದ್ದಿ
ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಅವಳಿ ನಗರದ ನೂತನ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಅವರಿಗೆ ಗಂಭೀರ ಅಪರಾಧ ಪ್ರಕರಣಗಳ ಆರೋಪಿಗಳು ಸನ್ಮಾನಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.
ಸಾಮಾಜಿಕ ಕಾರ್ಯಕರ್ತೆ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಅಮಿತ್ ಬದ್ದಿ ಮತ್ತು ಮಾದಕ ವಸ್ತು ಸಾಗಾಟ ಪ್ರಕರಣದ ಆರೋಪಿ ಖೇತ್ಸಿಂಗ್ ರಾಜಪುರೋಹಿತ್ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಹೂಗುಚ್ಛ ನೀಡಿ ಸನ್ಮಾನಿಸಿರುವ ಫೋಟೋಗಳು ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ.
ಭೂಷಣ್ ಬೋರಸೆ ಅವರು ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಹಲವು ಗಣ್ಯರು ಹಾಗೂ ಸಾರ್ವಜನಿಕರು ಶುಭ ಕೋರಲು ಆಗಮಿಸಿದ್ದರು. ಇದೇ ವೇಳೆ ಈ ಇಬ್ಬರು ಆರೋಪಿಗಳು ಆಯುಕ್ತರೊಂದಿಗೆ ಫೋಟೋ ತೆಗೆಸಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಪೊಲೀಸ್ ಆಯುಕ್ತರು ನಗರಕ್ಕೆ ಹೊಸಬರಾಗಿದ್ದರೂ, ಆಯುಕ್ತರ ಕಚೇರಿ ಸಿಬ್ಬಂದಿ ಆರೋಪಿಗಳ ಪ್ರವೇಶದ ಬಗ್ಗೆ ಎಚ್ಚರಿಕೆ ವಹಿಸಬೇಕಿತ್ತು. ಅಥವಾ ಆರೋಪಿಗಳಿಗೆ ಉದ್ದೇಶಪೂರ್ವಕವಾಗಿ ಪ್ರವೇಶ ನೀಡಲಾಗಿತ್ತೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಈ ಕುರಿತು ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಅವರನ್ನು ಸಂಪರ್ಕಿಸಲು ಯತ್ನಿಸಿದರೂ, ಅವರು ಸಂಪರ್ಕಕ್ಕೆ ಲಭ್ಯವಾಗಿಲ್ಲ.






