ಹುಬ್ಬಳ್ಳಿ | ಭಾರೀ ಮಳೆಗೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ 2 ದಿನಗಳ ಬಳಿಕ ಪತ್ತೆ

ಹುಸೇನ್ ಸಾಬ್ ಕಳಸ (58)
ಹುಬ್ಬಳ್ಳಿ: ನಗರದಾದ್ಯಂತ ಬುಧವಾರ ರಾತ್ರಿಯವರೆಗೂ ಸುರಿದ ಭಾರೀ ಮಳೆಗೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಬೈಕ್ ಸವಾರನೊಬ್ಬರ ಮೃತದೇಹ ಇಂದು(ಶುಕ್ರವಾರ) ಪತ್ತೆಯಾಗಿದೆ.
ನಗರದ ಬೀರಬಂದ ನಗರದ ನಿವಾಸಿ ಹುಸೇನ್ ಸಾಬ್ ಕಳಸ (58) ಕೊಚ್ಚಿ ಹೋದ ವ್ಯಕ್ತಿ. ಹುಸೇನ್ ಸಾಬ್ ಮತ್ತು ಇನ್ನೊಬ್ಬ ಸೇರಿ ಜಮೀನಿನ ಕೆಲಸ ಮುಗಿಸಿಕೊಂಡು ಬೈಕ್ನಲ್ಲಿ ರಾತ್ರಿ 10.30 ರ ಸುಮಾರಿಗೆ ನೇಕಾರನಗರಕ್ಕೆ ಮರಳುತ್ತಿದ್ದರು. ಈ ವೇಳೆ ನೇಕಾರನಗರದ ಸೇತುವೆ ಬಳಿ ಜೋರಾಗಿ ಹರಿಯುತ್ತಿದ್ದ ಮಳೆ ನೀರಲ್ಲಿ ಕೆಲವರು ದಾಟಿ ಮುಂದೆ ಸಾಗಿದ್ದಾರೆ. ಇದನ್ನು ನೋಡಿದ ಹುಸೇನ್ ಸಾಬ್ ಸಹ ಬೈಕ್ ದಾಟಿಸಲು ಪ್ರಯತ್ನಿಸಿದ್ದು, ಈ ವೇಳೆ ಆಯತಪ್ಪಿ ಬಿದ್ದು, ನೀರಿನಲ್ಲಿ ಕೊಚ್ಚಿ ಹೋಗಿದ್ದರು.
ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ, ಪೊಲೀಸರು, ಪಾಲಿಕೆ ಸಿಬ್ಬಂದಿಗಳು ನಿರಂತರ ಕಾರ್ಯಾಚರಣೆ ಬಳಿಕ ಇಂದು ಮಧ್ಯಾಹ್ನದ ವೇಳೆ ಘಟನೆ ನಡೆದ ಸ್ಥಳದಿಂದ ಒಂದೂವರೆ ಕಿ.ಮೀ. ದೂರದ ಹಳ್ಳದಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೆಎಂಸಿಆರ್ಐಗೆ ರವಾನಿಸಿದ್ದು, ಬಳಿಕ ಕುಟುಂಬಕ್ಕೆ ಹಸ್ತಾಂತರ ಮಾಡಲಿದ್ದಾರೆ.
ಈ ಕುರಿತಂತೆ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





