HUBBALLI | ಬಿಜೆಪಿ ಕಾರ್ಯಕರ್ತೆ ಸುಜಾತಾರಿಗೆ ಹಲ್ಲೆ ಆರೋಪ: 9 ಮಂದಿ ವಿರುದ್ಧ ಪ್ರಕರಣ ದಾಖಲು

ಹುಬ್ಬಳ್ಳಿ: ಚಾಲುಕ್ಯ ನಗರದಲ್ಲಿ ಜ.2ರಂದು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್ಐಆರ್) ಪೂರ್ವ ನಡೆಯುವ ಕುಟುಂಬ ಸದಸ್ಯರ ಮ್ಯಾಪಿಂಗ್ ಸಂದರ್ಭ ನಡೆದ ಗಲಾಟೆಗೆ ಸಂಬಂಧಿಸಿ ಹುಬ್ಬಳ್ಳಿಯ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯೆ ಸುವರ್ಣ ಕಲಕುಂಟ್ಲ ಸೇರಿದಂತೆ ಒಂಭತ್ತು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಬಿಜೆಪಿಯ ಕಾರ್ಯಕರ್ತೆ ಸುಜಾತಾ ಹಂಡಿ ಎಂಬವರಿಗೆ ಹಲ್ಲೆ ನಡೆಸಿರುವ ಬಗ್ಗೆ ಅವರ ಸಹೋದರ ಮರಿಯಾ ದಾಸ್ ನೀಡಿದ ದೂರಿನನ್ವಯ ಹಲ್ಲೆ, ಕೊಲೆ ಯತ್ನ, ಜೀವ ಬೆದರಿಕೆ, ಗಲಭೆ ಸೇರಿ ಗಂಭೀರ ಆರೋಪಗಳಡಿ ಒಂಭತ್ತು ಮಂದಿಯ ವಿರುದ್ಧ ಕೇಶ್ವಾಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದೇ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಕಾರ್ಪೊರೇಟರ್ ಸುವರ್ಣ ಕಲಕುಂಟ್ಲ ನೀಡಿರುವ ದೂರಿನ ಆಧಾರದಲ್ಲಿ ಬಿಜೆಪಿಯ ಕಾರ್ಯಕರ್ತೆ ಸುಜಾತಾ ಹಂಡಿಯವರನ್ನು ಕೇಶ್ವಾಪುರ ಠಾಣಾ ಪೊಲೀಸರು ಬಂಧಿಸಿದ್ದರು. ಬಂಧನದ ವೇಳೆ ಪೊಲೀಸರು ತನ್ನನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸುದ್ದಿಯಾಗಿದ್ದರು.
ಚಾಲುಕ್ಯ ನಗರದಲ್ಲಿ ಜ.2ರಂದು ನಡೆದ ಗಲಾಟೆಗೆ ಸಂಬಂಧಿಸಿ ಸುಜಾತಾರ ಸಹೋದರ ಮರಿಯಾ ದಾಸ್ ಬುಧವಾರ ರಾತ್ರಿ ದೂರು ನೀಡಿದ್ದು, ಜ.2ರಂದು ಮಧ್ಯಾಹ್ನ 1:30ರ ಸುಮಾರಿಗೆ ಪೀತಲು, ಡೇವಿಡ್ ಲುಂಜಾಲ, ಜ್ಞಾನೇಶ್, ನಿರ್ಮಲಾ ಇತ್ಯಾದಿ ಆರೋಪಿಗಳು ತನ್ನ ಅಕ್ಕ ಸುಜಾತಾ ಮೇಲೆ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದಾರೆ. ಆರೋಪಿಗಳಾದ ಡೇವಿಡ್ ಲುಂಜಾಲ ಮತ್ತು ಪ್ರಶಾಂತ ಬೊಮ್ಮಾಜಿ ತನ್ನ ಅಕ್ಕ ಮತ್ತು ತಾಯಿಯ ಸೀರೆ ಎಳೆದಾಡಲು ಪ್ರಯತ್ನಿಸಿದ್ದಾರೆ. ತಾಯಿ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ದೂರಿನಂತೆ ಕಾರ್ಪೊರೇಟರ್ ಸುವರ್ಣ ಕಲಕುಂಟ್ಲ, ಪೀತಲು, ಡೇವಿಡ್ ಲುಂಜಾಲ, ಜ್ಞಾನೇಶ್, ನಿರ್ಮಲಾ, ಪ್ರಶಾಂತ್, ಸಿಡ್ರಕ್, ಜಾನಿ, ಜಾಸಿನ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







