ಸಿಎಂ ಸಿದ್ದರಾಮಯ್ಯ ಕೈ ಎತ್ತಿದ್ದರಿಂದ ನನಗೆ ಆಘಾತವಾಗಿದೆ, ನನ್ನ ಕುಟುಂಬ ಬೇಸರಗೊಂಡಿದೆ: ಎಎಸ್ಪಿ ಭರಮನಿ

PC: x.com/DeccanHerald
ಬೆಂಗಳೂರು: ನನ್ನ ಸ್ವಯಂನಿವೃತ್ತಿ ಮನವಿ ಇನ್ನೂ ವಿಲೇವಾರಿಗೆ ಬಾಕಿಯಿದ್ದು, ಸದ್ಯ ಗೃಹ ಇಲಾಖೆಯ ಪರಿಗಣನೆಯಲ್ಲಿದೆ ಎಂದು ಧಾರವಾಡ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ಭರಮನಿ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ನಾನು ನನ್ನ ಸ್ವಯಂ ನಿವೃತ್ತಿ ಮನವಿಯನ್ನು ಹಿಂಪಡೆದಿಲ್ಲ ಹಾಗೂ ಸರಕಾರದ ನಿರ್ಧಾರದ ಕುರಿತು ಕಾಯುತ್ತಿದ್ದೇನೆ ಎಂದು ಗುರುವಾರ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
“ನಾನು ನನ್ನ ಸ್ವಯಂನಿವೃತ್ತಿ ಮನವಿಯನ್ನು ಹಿಂಪಡೆದಿಲ್ಲ. ಒಂದು ವೇಳೆ ಈ ಮನವಿಯನ್ನು ಸರಕಾರ ಅನುಮೋದಿಸಿದರೆ, ನಾನು ಸ್ವಯಂನಿವೃತ್ತಿಯ ನಿರ್ಣಯದೊಂದಿಗೆ ಮುಂದುವರಿಯಲಿದ್ದೇನೆ. ಒಂದು ವೇಳೆ ವಜಾಗೊಂಡರೆ, ನಾನು ಭವಿಷ್ಯದ ಕ್ರಮದ ಕುರಿತು ನಿರ್ಧರಿಸಲಿದ್ದೇನೆ” ಎಂದೂ ಅವರು ಹೇಳಿದ್ದಾರೆ. ಈ ನಡುವೆ, ನಾನು ನನ್ನ ಕರ್ತವ್ಯಗಳನ್ನು ಶ್ರದ್ಧೆಯಿಂದ ಮಾಡುವುದನ್ನು ಮುಂದುವರಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಎಪ್ರಿಲ್ 28ರಂದು ಬೆಳಗಾವಿಯಲ್ಲಿ ಆಯೋಜನೆಗೊಂಡಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ತಮಗಾದ ಅವಮಾನದಿಂದ ಮನನೊಂದು ನಾನು ನನ್ನ ಸ್ವಯಂನಿವೃತ್ತಿ ಅರ್ಜಿಯನ್ನು ಸಲ್ಲಿಸಿದ್ದೇನೆ ಎಂದು ನಾರಾಯಣ್ ಬರಮನಿ ತಿಳಿಸಿದ್ದರು.





