ಸಾಮಾಜಿಕ ನ್ಯಾಯಕೊಟ್ಟ ಸಮಾಜ ಇಂದು ನ್ಯಾಯ ಕೇಳುವಂತಾಗಿದೆ : ಈಶ್ವರ್ ಖಂಡ್ರೆ

ಹುಬ್ಬಳ್ಳಿ, ಸೆ. 19 : ‘ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಸಮಾಜದ ಹಿತಕ್ಕಾಗಿ ಎಲ್ಲರೂ ಒಮ್ಮತದಿಂದ ಮುಂದಡಿ ಇಡುವ ಸಮಯ ಬಂದಿದ್ದು, ಸಮಸ್ತ ವೀರಶೈವ-ಲಿಂಗಾಯತ ಮಠಮಾನ್ಯಗಳು, ಮುಖಂಡರು ಒಂದೇ ನಿಲುವು ತಳೆಯಬೇಕು’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಹಿರಿಯ ಉಪಾಧ್ಯಕ್ಷ ಹಾಗೂ ಸಚಿವ ಈಶ್ವರ್ ಬಿ. ಖಂಡ್ರೆ ಪ್ರತಿಪಾದಿಸಿದ್ದಾರೆ.
ಶುಕ್ರವಾರ ಇಲ್ಲಿನ ನೆಹರೂ ಮೈದಾನದಲ್ಲಿ ನಡೆದ ವೀರಶೈವ-ಲಿಂಗಾಯತ ಏಕತಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಸೆ.22ರಿಂದ ಅಕ್ಟೋಬರ್ 7ರ ವರೆಗೆ ರಾಜ್ಯಾದ್ಯಂತ ನಡೆಯಲಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಸಮಾಜದ ಎಲ್ಲರೂ ಜಾತಿಯ ಕಾಲಂನಲ್ಲಿ ವೀರಶೈವ ಅಥವಾ ಲಿಂಗಾಯತ ಎಂದೇ ಬರೆಸಲು ಉಳಿದಂತೆ ಉಪಜಾತಿಯ ಕಾಲಂನಲ್ಲಿ ತಮ್ಮ ತಮ್ಮ ಉಪಜಾತಿ ಹೆಸರು ಬರೆಸಬೇಕು ಎಂದು ಮನವಿ ಮಾಡಿದರು.
ಧರ್ಮ-ವಿವೇಚನೆಗೆ ಬಿಟ್ಟಿದ್ದು: ಸರಕಾರ ಅಥವಾ ಮಹಾಸಭಾ ಧರ್ಮ ಒಡೆಯುವ ಪ್ರಯತ್ನ ಮಾಡಿಲ್ಲ. 1940ರಿಂದ ವೀರಶೈವ ಧರ್ಮಕ್ಕೆ ಮಾನ್ಯತೆ ನೀಡಬೇಕೆಂದು ಮಹಾಸಭಾ ಪ್ರತಿಪಾದಿಸುತ್ತಾ ಬಂದಿದೆ. 2007ರಲ್ಲಿ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗಾಯತ-ವೀರಶೈವ ಬೇರೆ ಅಲ್ಲ. ವೀರಶೈವ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವಂತೆ ಮಹಾಸಭಾ ಹೋರಾಟ ಮುಂದುವರಿಸುತ್ತದೆ ಎಂದರು.
ಸಮೀಕ್ಷೆ ವೇಳೆ ಧರ್ಮದ ಕಾಲಂನ ಇತರೆ ಕಾಲಂನಲ್ಲಿ ವೀರಶೈವ-ಲಿಂಗಾಯತ ಧರ್ಮ ಎಂದು ಬರೆಸಬೇಕು ಎಂಬುದು ಮಹಾಸಭಾ ನಿಲುವು. ಆದರೆ ವೀರಶೈವ-ಲಿಂಗಾಯತ ಧರ್ಮವನ್ನು ಇನ್ನೂ ಗುರುತಿಸದ ಕಾರಣ ಸಮಾಜದ ಬಾಂಧವರು ಧರ್ಮದ ಕಾಲಂನಲ್ಲಿ ತಮ್ಮ ವಿವೇಚನೆಗೆ ಮತ್ತು ಆತ್ಮಸಾಕ್ಷಿಗೆ ಅನುಗುಣವಾಗಿ ಬರೆಸಬೇಕು ಎಂದು ಅವರು ಮನವಿ ಮಾಡಿದರು.
ರಾಜ್ಯ ಸರಕಾರ ನಡೆಸುತ್ತಿರುವುದು ಜಾತಿ ಗಣತಿ ಅಲ್ಲ, ಬದಲಿಗೆ ಅದು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ. ಸಮಾಜದ ಪ್ರತಿಯೊಬ್ಬ ಬಾಂಧವರೂ ತಪ್ಪದೆ ಈ ಸಮೀಕ್ಷೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಸಮೀಕ್ಷೆ ವೇಳೆ ಮನೆ-ಮನೆಗೆ ಬರುವ ಶಿಕ್ಷಕರು ಅಥವಾ ಸರಕಾರಿ ಸಿಬ್ಬಂದಿ ಧರ್ಮ, ಜಾತಿ, ಶಿಕ್ಷಣ ಮತ್ತು ಆರ್ಥಿಕ ಸ್ಥಿತಿಗತಿಗೆ ಸಂಬಂಧಿಸಿದಂತೆ 60ಕ್ಕೂ ಹೆಚ್ಚು ಪ್ರಶ್ನೆ ಕೇಳಲಿದ್ದು, ಎಲ್ಲರೂ ನಿಖರ ಮಾಹಿತಿ ನೀಡಬೇಕು ಎಂದರು.
ಈ ಸಮೀಕ್ಷೆಯಲ್ಲಿ ಲಿಂಗಾಯತ ಮತ್ತು ವೀರಶೈವ ಎರಡನ್ನೂ ಒಗ್ಗೂಡಿಸಿ ಅಂತಿಮವಾಗಿ ನಮ್ಮ ಸಮಾಜದ ಜನಸಂಖ್ಯೆಯನ್ನು ನಿರ್ಧರಿಸುತ್ತಾರೆ ಮತ್ತು ಅಂಕ ನೀಡುತ್ತಾರೆ. ಈ ಅಂಕದ ಆಧಾರದಲ್ಲಿ ಮತ್ತು ನಿಮ್ಮ ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗನುಗುಣವಾಗಿ ಮುಂದಿನ ದಿನಗಳಲ್ಲಿ ಮೀಸಲು ಲಭಿಸುತ್ತದೆ. ಹೀಗಾಗಿ ನೀವು ಜಾತಿಯ ಕಾಲಂನಲ್ಲಿ ಲಿಂಗಾಯತ ಎಂದಾದರೂ ಬರೆಸಿ, ವೀರಶೈವ ಎಂದಾದರೂ ಬರೆಸಿ ಎಂದು ತಿಳಿಸಿದರು.
ಜಾತಿಯ ಕಾಲಂನಲ್ಲಿ ಕೋಡ್ ಸಂಖ್ಯೆ ಎ1 -522-ವೀರಶೈವ ಅಥವಾ ಕೋಡ್ ಸಂಖ್ಯೆ ಎ083- ಲಿಂಗಾಯತ ಎಂದು ಕಡ್ಡಾಯವಾಗಿ ಬರೆಸಬೇಕು. ಹಾಗೂ ಉಪಜಾತಿಯ ಕಾಲಂನಲ್ಲಿ ಉಪ ಜಾತಿಯ ಕೋಡ್ ಸಂಖ್ಯೆಯನ್ನು ಮತ್ತು ಹೆಸರನ್ನು ಸರಿಯಾಗಿ ನಮೂದಿಸಬೇಕು ಎಂದು ಅವರು ತಿಳಿಸಿದರು.
ನ್ಯಾಯ ಕೇಳುವಂತಾಗಿದೆ: ಇಡೀ ಜಗತ್ತಿಗೆ 12ನೇ ಶತಮಾನದಲ್ಲೇ ಸಾಮಾಜಿಕ ನ್ಯಾಯ ನೀಡಿದ ಸಮಾಜ ಇಂದು ತಾನೇ ಸಾಮಾಜಿಕ ನ್ಯಾಯ ಕೇಳುವ ಸ್ಥಿತಿ ಬಂದಿದೆ. ವೀರಶೈವ, ಲಿಂಗಾಯತ ಮಠಮಾನ್ಯಗಳು, ಆಶ್ರಯ, ಅರಿವು, ಅನ್ನ ಈ ತ್ರಿವಿಧ ದಾಸೋಹದ ಮೂಲಕ ಸುಶಿಕ್ಷಿತ ಸಮಾಜಕ್ಕೆ ನಾಂದಿ ಹಾಡಿ, ನವ ಕರ್ನಾಟಕ ಆ ಮೂಲಕ ನವ ಭಾರತದ ನಿರ್ಮಾಣಕ್ಕೆ ದೊಡ್ಡ ಕೊಡುಗೆ ನೀಡಿದೆ ಎಂದರು.
ಎಲ್ಲರನ್ನೂ ಅಪ್ಪಿಕೊಂಡು, ಒಪ್ಪಿಕೊಂಡು, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದ ಆಧಾರದಲ್ಲಿ ಸರ್ವರ ಹಿತ ಬಯಸುವ ವೀರಶೈವ ಲಿಂಗಾಯತ ಸಮುದಾಯ ಇಡೀ ಜಗತ್ತಿಗೇ ಮಾದರಿಯಾಗಿದೆ ಎಂದ ಈಶ್ವರ ಖಂಡ್ರೆ, ಬಸವಾದಿ ಶರಣರು 12ನೇ ಶತಮಾನದಲ್ಲೇ ಅನುಭವ ಮಂಟಪದ ಮೂಲಕ ಜಗತ್ತಿಗೆ ಸಂಸತ್ತು ಮತ್ತು ಪ್ರಜಾಪ್ರಭುತ್ವದ ಪರಿಕಲ್ಪನೆ ಕಟ್ಟಿಕೊಟ್ಟಿದ್ದರು ಎಂದರು.







