ಹುಬ್ಬಳ್ಳಿ-ಧಾರವಾಡ ಮನಪಾದ 12 ವಲಯ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯಗಳ ಕಚೇರಿಗಳ ಮೇಲೆ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಇ-ಸ್ವತ್ತು ಮತ್ತು ಭೂ ದಾಖಲೆಗಳ ವರ್ಗಾವಣೆ ಸೇರಿದಂತೆ ಇನ್ನಿತರ ದಾಖಲೆಗಳನ್ನು ಮಾಡಿಕೊಡುವಲ್ಲಿ ವಿಳಂಬ ಮಾಡಲಾಗುತ್ತಿದೆ ಎಂಬ ದೂರುಗಳನ್ನು ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 12 ವಲಯ ಕಚೇರಿಗಳನ್ನು ಒಳಗೊಂಡಿದ್ದು, ಎಲ್ಲ ಕಚೇರಿಗಳ ಮೇಲೆ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಎಸ್.ಟಿ. ನೇತೃತ್ವದಲ್ಲಿ ಪ್ರತ್ಯೇಕವಾಗಿ 12 ತಂಡಗಳಲ್ಲಿ ಕಾರ್ಯಾಚರಣೆ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಇ- ಸ್ವತ್ತು ಕುರಿತಂತೆ ಸಾಕಷ್ಟು ಆರೋಪಗಳು ಮಹಾನಗರ ಪಾಲಿಕೆಯಲ್ಲಿ ಕೇಳಿಬಂದಿದ್ದವು. ದುಡ್ಡು ಕೊಟ್ಟರೆ ಮಾತ್ರ ಇ- ಸ್ವತ್ತು ನೀಡಲಾಗುತ್ತದೆ. ಇಲ್ಲವಾದರೆ ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದರು. ಇದರ ಅಧಾರದ ಮೇಲೆ ಅಧಿಕಾರಿಗಳು, ದೂರುಗಳಿಗೆ ಸಂಬಂಧಿಸಿದ ಅಗತ್ಯ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.




