ಹುಬ್ಬಳ್ಳಿ-ಧಾರವಾಡಕ್ಕೆ ಮಹಾದಾಯಿ ಯೋಜನೆ ನೀರು: ಅನುಮತಿಗಾಗಿ ಮನಪಾ ಸಭೆ ಕರೆಯಲು ರೈತರ ಆಗ್ರಹ

ಹುಬ್ಬಳ್ಳಿ: ಮಹಾದಾಯಿ ಯೋಜನೆಯಡಿ ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಕುಡಿಯುವ ನೀರಿಗಾಗಿ ಹಂಚಿಕೆಯಾಗಿರುವ ನೀರನ್ನು ಬಳಕೆಗೆ ಅಗತ್ಯ ಅನುಮತಿ ಕೊಡಿಸುವ ಕುರಿತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 82 ಚುನಾಯಿತ ಸದಸ್ಯರ ಸಭೆಯನ್ನು 10 ದಿನಗಳೊಳಗೆ ಕರೆಯಬೇಕು ಎಂದು ರೈತಸೇನಾ ಕರ್ನಾಟಕ ಆಗ್ರಹಿಸಿದೆ.
ಸಭೆಯಲ್ಲಿ ಮಹಾದಾಯಿ ಯೋಜನೆ ಜಾರಿ ಕುರಿತು ಸ್ಪಷ್ಟ ನಿರ್ಣಯ ಕೈಗೊಂಡು ಕೇಂದ್ರ ಹಾಗೂ ರಾಜ್ಯ ಸರಕಾರದ ಮೇಲೆ ಒತ್ತಡ ಹೇರಬೇಕು. ಇಲ್ಲವಾದರೆ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ಪಾಲಿಕೆಯ ಕಚೇರಿ ಎದುರು ಅಹೋರಾತ್ರಿ, ಅನಿರ್ದಿಷ್ಟಾವಧಿ ಧರಣಿ ನಡೆಸಲಿದ್ದಾರೆ ಎಂದು ರೈತಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾದಾಯಿ ಯೋಜನೆ ಜಾರಿಗಾಗಿ 2015ರ ಜುಲೈ 16ರಿಂದ ಹೋರಾಟ ನಡೆಯುತ್ತಿದೆ. 2018ರ ಆಗಸ್ಟ್ 14ರಂದು ಮಹಾದಾಯಿ ನ್ಯಾಯಾಧಿಕರಣ ತೀರ್ಪು ಪ್ರಕಟಿಸಿದ್ದು, ಕರ್ನಾಟಕಕ್ಕೆ ಒಟ್ಟು 13.42 ಟಿಎಂಸಿ ನೀರು ಹಂಚಿಕೆಯಾಗಿದೆ. ಅದರಲ್ಲಿ ಕುಡಿಯುವ ನೀರಿಗಾಗಿ ಹಂಚಿಕೆಯಾಗಿರುವ ನೀರನ್ನು ಬಳಸಿಕೊಳ್ಳಲು ಇದುವರೆಗೆ ಅಗತ್ಯ ಅನುಮತಿ ದೊರೆತಿಲ್ಲ ಎಂದು ಹೇಳಿದರು.
ಮಹಾದಾಯಿ ಯೋಜನೆಯಿಂದ ಹಂಚಿಕೆಯಾಗಿರುವ ನೀರನ್ನು ಬಳಸಿಕೊಳ್ಳುವ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಪಷ್ಟ ನಿಲುವು ಪ್ರಕಟಿಸಬೇಕು. ಈ ಕುರಿತು ನಿರಂತರ ಹೋರಾಟ ನಡೆಸಿದರೂ ಪರಿಹಾರ ದೊರೆತಿಲ್ಲ. 2026ರಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದು, ರೈತರು ಕುಡಿಯುವ ನೀರು ಹಾಗೂ ಕೃಷಿಗೆ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.
ಕೃಷಿಗೆ ನಿರ್ಮಿಸಿದ ಜಲಾಶಯ
ಮಲಪ್ರಭಾ ಜಲಾಶಯವನ್ನು ಪ್ರಮುಖವಾಗಿ ಕೃಷಿ ಉದ್ದೇಶಕ್ಕಾಗಿ ನಿರ್ಮಿಸಲಾಗಿದೆ. ಜಲಾಶಯ ನಿರ್ಮಾಣಕ್ಕಾಗಿ ರೈತರಿಂದ ಭೂಮಿ ಸ್ವಾಧೀನಪಡಿಸಿಕೊಂಡಿದ್ದು, ನವಲಗುಂದ, ನರಗುಂದ, ರೋಣ, ಬಾದಾಮಿ, ರಾಮದುರ್ಗ, ಸವದತ್ತಿ, ಬೈಲಹೊಂಗಲ ಸೇರಿದಂತೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರಾವರಿ ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಸುಮಾರು 2.25 ಲಕ್ಷ ಹೆಕ್ಟೇರ್ಗೂ ಅಧಿಕ ಪ್ರದೇಶ ಈ ಯೋಜನೆಯ ಪ್ರಯೋಜನ ಪಡೆಯುತ್ತಿದೆ ಎಂದು ಸೊಬರದಮಠ ಹೇಳಿದರು.
ಕೃಷಿಗೆ ಮೀಸಲಿಟ್ಟ ನೀರನ್ನು ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಕುಡಿಯುವ ನೀರಿಗಾಗಿ ಬಳಸುವುದಕ್ಕೆ ಅಚ್ಚುಕಟ್ಟು ಪ್ರದೇಶದ ರೈತರ ವಿರೋಧವಿಲ್ಲ. ಆದರೆ, ನಗರಕ್ಕೆ ಹಾಗೂ ಕೈಗಾರಿಕೆಗಳಿಗೆ ಪೂರೈಸುವ ನೀರಿನ ಕುರಿತು ಸಂಪೂರ್ಣ ಮಾಹಿತಿ ಸಾರ್ವಜನಿಕಗೊಳಿಸಬೇಕು ಎಂದು ಒತ್ತಾಯಿಸಿದರು.
ನೀರಿನ ತೆರಿಗೆ ಮಾಹಿತಿ ಕೇಳಿದ ರೈತ ಸೇನೆ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಯಾವ ವರ್ಷದಿಂದ ಮಲಪ್ರಭಾ ಜಲಾಶಯದಿಂದ ಕುಡಿಯುವ ನೀರು ಪಡೆಯುತ್ತಿದೆ? ಕೈಗಾರಿಕಾ ಸಂಸ್ಥೆಗಳಿಗೆ ಯಾವ ಒಪ್ಪಂದದಡಿ ನೀರು ಪೂರೈಸಲಾಗುತ್ತಿದೆ? ಕೈಗಾರಿಕೆಗಳಿಗೆ ಪೂರೈಸುವ ನೀರಿನ ಪ್ರಮಾಣ ಎಷ್ಟು? ನಾಗರಿಕರು ಹಾಗೂ ಕೈಗಾರಿಕೆಗಳಿಂದ ಇದುವರೆಗೆ ಸಂಗ್ರಹಿಸಿರುವ ನೀರಿನ ತೆರಿಗೆ ಎಷ್ಟು? ಎಂಬ ಕುರಿತು ಸಂಪೂರ್ಣ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಮಲಪ್ರಭಾ ಜಲಾಶಯದ ನೀರನ್ನು ಬಳಸಿಕೊಂಡು ನಗರಕ್ಕೆ ಹಾಗೂ ಕೈಗಾರಿಕೆಗಳಿಗೆ ನೀರು ಪೂರೈಸಲಾಗುತ್ತಿದೆ. ಹೀಗಾಗಿ ಇದರಿಂದ ಸಂಗ್ರಹವಾಗಿರುವ ತೆರಿಗೆ ಮೊತ್ತದ ಒಂದು ಭಾಗವನ್ನು ಅಚ್ಚುಕಟ್ಟು ಪ್ರದೇಶದ ರೈತರ ಹಿತಕ್ಕಾಗಿ ಬಳಸಬೇಕು ಎಂಬುದು ರೈತಸೇನೆಯ ಬೇಡಿಕೆಯಾಗಿದೆ ಎಂದರು.
10 ದಿನದಲ್ಲಿ ಸಭೆ
ಪಾಲಿಕೆಯ ಮುಖ್ಯ ಅಧಿಕಾರಿಗಳು 10 ದಿನಗಳೊಳಗೆ 82 ಸದಸ್ಯರ ಸಭೆ ಕರೆದು ಮಹಾದಾಯಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಚರ್ಚಿಸಲು ದಿನಾಂಕ ಮತ್ತು ಸ್ಥಳ ನಿಗದಿಪಡಿಸಬೇಕು. ಸಭೆಯಲ್ಲಿ ರೈತಸೇನೆಯ ಪ್ರತಿನಿಧಿಗಳನ್ನೂ ಆಹ್ವಾನಿಸಿ, ಪಾಲಿಕೆ ಸದಸ್ಯರ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದರು.
ನಿಗದಿತ ಅವಧಿಯಲ್ಲಿ ಸಭೆ ಕರೆಯದೆ ಬೇಡಿಕೆಗೆ ಸ್ಪಂದಿಸದಿದ್ದರೆ ನಾಲ್ಕು ಜಿಲ್ಲೆಗಳ 11 ತಾಲೂಕುಗಳ ರೈತರು ಪಾಲಿಕೆ ಎದುರು ಶಾಂತಿಯುತವಾಗಿ ಅಹೋರಾತ್ರಿ ಧರಣಿ ಆರಂಭಿಸಲಿದ್ದಾರೆ. ಹೋರಾಟದ ಸಂದರ್ಭದಲ್ಲಿ ರೈತರಿಗೆ ಯಾವುದೇ ತೊಂದರೆ ಉಂಟಾದರೆ ಅದಕ್ಕೆ ಪಾಲಿಕೆ ಅಧಿಕಾರಿಗಳು ಹಾಗೂ ಚುನಾಯಿತ ಸದಸ್ಯರೇ ಹೊಣೆ ಎಂದು ಸೊಬರದಮಠ ಎಚ್ಚರಿಸಿದರು.
ಸುದ್ದಿಗೋಷ್ಠಿಯ ಬಳಿಕ ರೈತಸೇನಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾದಯಾತ್ರೆ ಮೂಲಕ ಮಹಾನಗರ ಪಾಲಿಕೆ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.






