ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು; ಕಾಂಗ್ರೆಸ್ ಆಡಳಿತದ ವಿರುದ್ಧ ಮತದಾರರು ನೀಡಿದ ಸ್ಪಷ್ಟ ಸಂದೇಶ : ಮಹೇಶ ಟೆಂಗಿನಕಾಯಿ

ಹುಬ್ಬಳ್ಳಿ : ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರು ಗೆಲುವು ಸಾಧಿಸಿರುವುದು ಕಾಂಗ್ರೆಸ್ ಆಡಳಿತದ ವಿರುದ್ಧ ಮತದಾರರು ನೀಡಿದ ಸ್ಪಷ್ಟ ಸಂದೇಶವಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ಸಂಘಟಿತ ಹೋರಾಟಕ್ಕೆ ಜಯ ಸಿಕ್ಕಿದೆ. ಕಾಂಗ್ರೆಸ್ ಎಂಟು ತಿಂಗಳ ಹಿಂದೆಯೇ ಅಭ್ಯರ್ಥಿ ಘೋಷಿಸಿದ್ದರೂ, ಬಿಜೆಪಿ ಕೊನೆಯ ಹಂತದಲ್ಲಿ ಅಭ್ಯರ್ಥಿ ಘೋಷಿಸಿ ಗೆಲುವು ಸಾಧಿಸಿದೆ. ಕಾರ್ಯಕರ್ತರು ಮನೆಮನೆಗೆ ತೆರಳಿ ಮತದಾರರನ್ನು ತಲುಪಿದ್ದೇ ಗೆಲುವಿಗೆ ಪ್ರಮುಖ ಕಾರಣ. ಪ್ರಥಮ ಪ್ರಾಶಸ್ತ್ಯದ ಮತಗಳಲ್ಲಿಯೇ ಸಂಕನೂರು ಜಯಗಳಿಸಿರುವುದು ಪಕ್ಷದ ಸಂಘಟನಾ ಶಕ್ತಿಯನ್ನು ತೋರಿಸಿದೆ ಎಂದರು.
ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದ್ದು, ಅವುಗಳ ಆಧಾರದಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದು ಫಲಿತಾಂಶದಿಂದ ಸ್ಪಷ್ಟವಾಗಿದೆ. ಮತದಾರರು ಜಾತಿ, ಧರ್ಮ ಮತ್ತು ಹಣದ ಆಮಿಷಗಳನ್ನು ಮೀರಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಮುಂದಿನ ಚುನಾವಣೆಗಳಿಗೂ ಈ ಫಲಿತಾಂಶ ದಿಕ್ಸೂಚಿಯಾಗಲಿದೆ ಎಂದು ಹೇಳಿದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್ಡಿಎ ಅಭೂತಪೂರ್ವ ಗೆಲುವು ಸಾಧಿಸಿದೆ. ಕಾಂಗ್ರೆಸ್ನ ದ್ವಂದ್ವ ನೀತಿ ಮತ್ತು ಆಡಳಿತದ ವಿರುದ್ಧ ಮತದಾರರು ಸ್ಪಷ್ಟ ಉತ್ತರ ನೀಡಿದ್ದಾರೆ. ಈ ಗೆಲುವಿನ ಶ್ರೇಯಸ್ಸು ಪಕ್ಷದ ಕಾರ್ಯಕರ್ತರಿಗೆ ಸಲ್ಲುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ತಿಪ್ಪಣ್ಣ ಮಜ್ಜಗಿ, ಲಿಂಗರಾಜ ಪಾಟೀಲ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.






