ಜಿಲ್ಲಾಧಿಕಾರಿಗಳು, ವಿವಿಧ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಭಾಗಿಯಾಗುವಂತೆ ಮಾಡಿರುವುದು ಆಡಳಿತ ಯಂತ್ರದ ರಾಜಕೀಯ ದುರ್ಬಳಕೆ: ರಜತ್
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ; ಆರೋಪ

ಹುಬ್ಬಳ್ಳಿ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ನೀತಿ ಸಂಹಿತೆ ಜಾರಿ ಇರುವ ವೇಳೆಯೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ಶಾಸಕರು ರವಿವಾರ ತಡರಾತ್ರಿ ಹುಬ್ಬಳ್ಳಿಯ ಅತಿಥಿ ಗೃಹದಲ್ಲಿ ರೈತರ ಸಭೆ ನಡೆಸುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅಲ್ಲದೆ ಮಧ್ಯರಾತ್ರಿಯ ಸಭೆಯಲ್ಲಿ ಧಾರವಾಡ ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳನ್ನು ಭಾಗಿಯಾಗುವಂತೆ ಮಾಡಿರುವುದು ಆಡಳಿತ ಯಂತ್ರದ ರಾಜಕೀಯ ದುರ್ಬಳಕೆ ಎಂಬ ಆರೋಪವು ಕೇಳಿ ಬಂದಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಿತ್ತೂರಿಗೆ ನೇರವಾಗಿ ಭೇಟಿ ನೀಡಿ ರೈತರ ಕುಂದುಕೊರತೆಗಳನ್ನು ಆಲಿಸಿ ಸಕಾರಾತ್ಮಕವಾಗಿ ಸ್ಪಂದಿಸಲು ಮುಂದಾಗಿದ್ದರು. ಆದರೆ, ರೈತರಿಗೆ ನ್ಯಾಯ ಸಿಗುವ ಹಂತ ತಲುಪಿದ ಬೆನ್ನಲ್ಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರು ನಡೆಸಿರುವ ತಂತ್ರಗಾರಿಕೆ ಹಲವು ಅನುಮಾನಗಳಿಗೆ ಹಾಗೂ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಎಂದಿದ್ದಾರೆ.
ಮಧ್ಯರಾತ್ರಿಯಲ್ಲಿ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ಲೋಕೋಪಯೋಗಿ ಇಲಾಖೆಯ (PWD) ಅತಿಥಿ ಗೃಹಕ್ಕೆ ರೈತ ಮುಖಂಡರನ್ನು ಕರೆಸಿಕೊಂಡು ರಹಸ್ಯ ಸಭೆ ನಡೆಸಿರುವುದು ಯಾವ ಉದ್ದೇಶಕ್ಕೆ? ಇದರ ಹಿಂದೆ ರೈತರ ಬೆಂಬಲ ಬೆಲೆ ಹೋರಾಟವನ್ನು ಹತ್ತಿಕ್ಕುವ ಮತ್ತು ಕ್ರೆಡಿಟ್ ರಾಜಕೀಯ ಮಾಡುವ ದುರ್ಬುದ್ಧಿ ಎದ್ದು ಕಾಣುತ್ತಿದೆ ಎಂದು ಅವರು ದೂರಿದ್ದಾರೆ.
ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ: ಪ್ರಸ್ತುತ ಪದವೀಧರ ಕ್ಷೇತ್ರದ ಚುನಾವಣೆ ನಡೆಯುತ್ತಿದ್ದು, ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಅತಿಥಿ ಗೃಹವನ್ನು ರಾಜಕೀಯ ಚರ್ಚೆಗಳು ಹಾಗೂ ಪ್ರಭಾವ ಬೀರಲು ಬಳಸಿರುವುದು ಚುನಾವಣಾ ನೀತಿ ಸಂಹಿತೆಯ ನೇರ ಉಲ್ಲಂಘನೆಯಾಗಿದೆ. ಅಲ್ಲದೇ, ಈ ಮಧ್ಯರಾತ್ರಿಯ ರಹಸ್ಯ ಸಭೆಯಲ್ಲಿ ಧಾರವಾಡ ಜಿಲ್ಲಾಧಿಕಾರಿ ಹಾಗೂ ವಿವಿಧ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳನ್ನು ಭಾಗಿಯಾಗುವಂತೆ ಮಾಡಿರುವುದು ಆಡಳಿತ ಯಂತ್ರದ ರಾಜಕೀಯ ದುರ್ಬಳಕೆಗೆ ಅತ್ಯಂತ ಜ್ವಲಂತ ನಿದರ್ಶನವಾಗಿದೆ. ಸರ್ಕಾರಿ ಅಧಿಕಾರಿಗಳನ್ನು ರಾಜಕೀಯ ಲಾಭಕ್ಕೆ ಅಣಿಗೊಳಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಎಸಗಿದ ದ್ರೋಹ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಣ್ಣಿಗೆ ಮಣ್ಣೆರಚುವ ತಂತ್ರ:
ಹಗಲಿರುಳು ಬೀದಿಯಲ್ಲಿದ್ದು ಹೋರಾಡುತ್ತಿರುವ ರೈತರ ಬಳಿಗೆ ತೆರಳಲು ಹಿಂಜರಿದ ನಾಯಕರು, ಹುಬ್ಬಳ್ಳಿಯ ಮುಚ್ಚಿದ ಕೊಠಡಿಯಲ್ಲಿ ಮಧ್ಯರಾತ್ರಿ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಿದ ಈ ಸಭೆಯ ನಿಗೂಢ ಉದ್ದೇಶವೇನು? ರೈತರ ನ್ಯಾಯಯುತ ಬೇಡಿಕೆಯನ್ನು ಈಡೇರಿಸುವ ಬದಲು ಹೋರಾಟವನ್ನು ಒಡೆಯಲು ಈ ತಂತ್ರ ಹೆಣೆಯಲಾಗಿದೆಯೇ? ರೈತರ ಹೆಸರು ಹೇಳಿಕೊಂಡು ಅಧಿಕಾರ ಅನುಭವಿಸುತ್ತಿರುವ ಕೇಂದ್ರ ಸಚಿವರು ಹಾಗೂ ಜನಪ್ರತಿನಿಧಿಗಳು ಇಂತಹ 'ಮಧ್ಯರಾತ್ರಿಯ ಕಟ್ಟುಕಥೆ'ಗಳ ಮೂಲಕ ರೈತ ಸಮುದಾಯವನ್ನು ವಂಚಿಸುವುದನ್ನು ತಕ್ಷಣವೇ ನಿಲ್ಲಿಸಬೇಕು. ಆಡಳಿತ ದುರ್ಬಳಕೆ ಮತ್ತು ನೀತಿ ಸಂಹಿತೆ ಉಲ್ಲಂಘನೆ ವಿರುದ್ಧ ಚುನಾವಣಾ ಆಯೋಗವು ತಕ್ಷಣವೇ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಹಿಂದೆಯೂ ಸುಳ್ಳು ಭರವಸೆ
ಉತ್ತರ ಕರ್ನಾಟಕದ ಆಶೋತ್ತರವಾದ ಮಹದಾಯಿ ಮತ್ತು ಕಳಸಾ-ಬಂಡೂರಿ ನದಿ ಜೋಡಣೆ ಹೋರಾಟದ ಸಮಯದಲ್ಲಿ ರೈತರಿಗೆ ನೀಡಿದ ಸುಳ್ಳು ಭರವಸೆಗಳು ಮತ್ತು ತಂತ್ರಗಾರಿಕೆಗಳನ್ನು ಉತ್ತರ ಕರ್ನಾಟಕದ ಜನತೆ ಇನ್ನೂ ಮರೆತಿಲ್ಲ. ಅಂದು ಕಳಸಾ-ಬಂಡೂರಿ ಹೋರಾಟಗಾರರಿಗೆ ಪರಿಹಾರ ಒದಗಿಸುವುದಾಗಿ, ಗೋವಾ ಸರ್ಕಾರದ ಒಪ್ಪಿಗೆ ಪತ್ರ ಕೊಡಿಸುವುದಾಗಿ ಭರವಸೆ ನೀಡಿ, ಕೊನೆಗೆ ನೆಹರೂ ಮೈದಾನದಲ್ಲಿ ಪತ್ರ ತೋರಿಸಿ, ಡಿಪಿಆರ್ ಸಿದ್ಧಪಡಿಸಿದ್ದೇವೆ ಅಂಥ ಫೇಸ್ಬುಕ್ ನಲ್ಲಿ ವಿಡಿಯೋ ಹರಿಬಿಟ್ಟು ನವಲಗುಂದ ಹಾಗೂ ಹುಬ್ಬಳ್ಳಿ ಭಾಗದ ರೈತರನ್ನು ಹಾದಿತಪ್ಪಿಸಲಾಗಿತ್ತು ಎಂದು ದೂರಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮಹದಾಯಿ ವಿಚಾರದಲ್ಲಿ ತಾವೇ ಸಮಸ್ಯೆಯನ್ನು ತಕ್ಷಣ ಬಗೆಹರಿಸುತ್ತೇವೆಂದು ರೈತರನ್ನು ದೆಹಲಿಗೆ ಅಲೆದಾಡಿಸಿ, ಕೊನೆಗೆ ರಾಜಕೀಯ ಕ್ರೆಡಿಟ್ ಪಡೆಯುವ ಸಲುವಾಗಿ ಹೋರಾಟದ ಹಾದಿಯನ್ನೇ ದಿಕ್ಕು ತಪ್ಪಿಸಿದ್ದರು ಎಂಬ ಆಕ್ರೋಶ ರೈತರಲ್ಲಿ ಇಂದಿಗೂ ಹಸಿಯಾಗಿದೆ.
ಅದೇ ದುಷ್ಟ ರಾಜಕೀಯ ಮಾದರಿಯನ್ನು ಈಗ ಕಬ್ಬು ಬೆಳೆಗಾರರ ನ್ಯಾಯಯುತ ಹೋರಾಟದ ವಿಷಯದಲ್ಲೂ ಪುನರಾವರ್ತಿಸಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಮುಂದಾಗಿದ್ದಾರೆ ಎಂದು ರಜತ್ ಹೇಳಿದ್ದಾರೆ.






