ನವಲಗುಂದ : ವಿದ್ಯುತ್ ಕಂಬಕ್ಕೆ ಸಿಮೆಂಟ್ ಸಾಗಾಟದ ಲಾರಿ ಢಿಕ್ಕಿ; ಎರಡು ಮನೆಗಳಿಗೆ ಹಾನಿ

ನವಲಗುಂದ : ನವಲಗುಂದ ದಿಂದ ಹುಬ್ಬಳ್ಳಿ ಕಡೆ ಹೊರಟಿದ್ದ ಸಿಮೆಂಟ್ ಚೀಲ ತುಂಬಿದ ಲಾರಿಯೊಂದು ಪಟ್ಟಣದ ಗೋವಿಂದಪ್ಪ ಕನಕೇರಿ ಮನೆ ಬಳಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ಸೋಮವಾರ ಮಧ್ಯರಾತ್ರಿ ನಡೆದಿದೆ.
ಘಟನೆಯಲ್ಲಿ ಹುಬ್ಬಳ್ಳಿ ವಿಜಯಪುರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಎರಡು ಮನೆಗಳು ಜಖಂಗೊಂಡಿವೆ. ಪರಿಣಾಮ ಮಧ್ಯರಾತ್ರಿಯಿಂದಲೇ ಪಟ್ಟಣದ ಕೆಲ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ರಾಷ್ಟ್ರೀಯ ಹೆದ್ದಾರಿ ಮೇಲೆ ಅವಘಡ ಸಂಭವಿಸಿದ್ದರಿಂದ ಕಿಲೋಮೀಟರ್ ಉದ್ದಕ್ಕೂ ವಾಹನಗಳ ದಟ್ಟನೆ ಕಂಡು ಬಂದಿದ್ದು, ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹೆಸ್ಕಾಂ ಸಿಬ್ಬಂದಿಯ ಸಹಾಯದಿಂದ ಲಾರಿ ಹಾಗೂ ಹೆದ್ದಾರಿ ಮೇಲೆ ಬಿದ್ದಿದ್ದ ವಿದ್ಯುತ್ ತಂತಿಗಳನ್ನು ಸರಿಪಡಿಸಿದ ನಂತರ ಸುಗಮಸಂಚಾರಕ್ಕೆ ಅನುವು ಮಾಡಿಕೊಟ್ಟರು.
ವಾಹನ ಚಾಲಕ ಪರಾರಿಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯುತ್ ಸಂಪರ್ಕವಿಲ್ಲದ್ದರಿಂದ ಹಾಗೂ ವಾಹನದಟ್ಟನೆಯಿಂದ ಸ್ಥಳೀಯ ಮನೆಯವರು ನಿದ್ದೆಯಿಲ್ಲದೆ ರಾತ್ರಿ ಕಳೆಯಬೇಕಾಯಿತು ಎಂದು ತಿಳಿದು ಬಂದಿದೆ.






