ಹುಬ್ಬಳ್ಳಿ | ಮಳೆ, ಪ್ರವಾಹ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂತೋಷ್ ಲಾಡ್

ಧಾರವಾಡ : ಹುಬ್ಬಳ್ಳಿ ಮತ್ತು ನವಲಗುಂದ ಸೇರಿದಂತೆ ತಾಲೂಕಿನ ಕರ್ಲವಾಡ, ಆರೇಕುರಟ್ಟಿ, ಯಮನೂರ ಗ್ರಾಮಗಳ ಹತ್ತಿರ ಬೆಣ್ಣಿಹಳ್ಳದ ಪ್ರವಾಹದಿಂದ ಅಪಾರ ಪ್ರಮಾಣದ ನೀರು ಬಂದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದ ಮತ್ತು ಹಾನಿಯಾದ ಪ್ರದೇಶವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ಲಾಡ್ ಹಾಗೂ ಶಾಸಕ ಎನ್.ಎಚ್.ಕೋನರಡ್ಡಿ ವೀಕ್ಷಣೆ ಮಾಡಿದರು.
ರಸ್ತೆ, ಸೇತುವೆ ಹಾಗೂ ಇತರ ಸಾರ್ವಜನಿಕ ಮೂಲ ಸೌಕರ್ಯಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ, ತ್ವರಿತವಾಗಿ ದುರಸ್ತಿ, ಮರು ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸಂತೋಷ್ ಲಾಡ್ ನಿರ್ದೇಶಿಸಿದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೈತರು ಈಗಾಗಲೇ ಹೆಸರು ಬೆಳೆ ಹಾಗೂ ಇತರೆ ಮುಂಗಾರು ಬೆಳೆ ಬಿತ್ತಿದ್ದಾರೆ. ಹೆಸರು ಬೆಳೆ ಮೊಳಕೆ ಒಡೆಯುವ ಹಂತಕ್ಕೆ ಬಂದಿದ್ದು, ಧಾರಾಕಾರ ಮಳೆಯಿಂದ ರೈತರಿಗೆ ಆರ್ಥಿಕವಾಗಿ ನಷ್ಟವಾಗಿದೆ ಎಂದು ಹೇಳಿದರು.
ಬೆಳೆ ಹಾನಿ ಬಗ್ಗೆ ಮಾಹಿತಿ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಮಾಹಿತಿ ಮತ್ತು ವರದಿ ಮೇಲೆ ಸರಕಾರದ ಜೊತೆ ಚರ್ಚಿಸಿ, ಎಸ್.ಡಿ.ಆರ್.ಎಫ್ ನಿಯಾಮವಳಿಗಳನ್ನು ಪರಿಶೀಲಿಸಿ, ಅದಕ್ಕೆ ಅನುಗುಣವಾಗಿ ಪರಿಹಾರ ನೀಡಲಾಗುವುದು ಎಂದು ಅವರು ತಿಳಿಸಿದರು.
ನವಲಗುಂದ ಭಾಗದಲ್ಲಿ 7-8 ಜಾಗಗಳಲ್ಲಿ ಪ್ರವಾಹ ನೋಡಿದ್ದೇನೆ. ನಾಲಾ ಹಾಗೂ ಹಳ್ಳ ಅಗಲೀಕರಣಕ್ಕೆ 1600 ಕೋಟಿ ರೂ. ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರಲ್ಲಿ 200 ಕೋಟಿ ರೂ.ಗಳನ್ನು 140 ಕಿ.ಮೀ ಹಳ್ಳ ಅಗಲೀಕರಣ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಸಂತೋಷ್ ಲಾಡ್ ಹೇಳಿದರು.
ಬಹಳ ವರ್ಷಗಳಿಂದ ನವಲಗುಂದ, ಕುಂದಗೋಳ ಭಾಗಗಳಲ್ಲಿ ಈ ರೀತಿ ಪ್ರವಾಹ ಪರಿಸ್ಥಿತಿಯಿಂದ ತೊಂದರೆ ಆಗುತ್ತಿದೆ. ಇದಕ್ಕೆ ಸಂಪೂರ್ಣ ಪರಿಹಾರ ಕಂಡು ಹಿಡಿಯಬೇಕು. ಬದು ಪುನರ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ 160 ಕೋಟಿ ರೂ.ಗಳ ಕಾಮಗಾರಿಗೆ ಡಿಪಿಆರ್ ಮಾಡಲಾಗಿದೆ. 2026ರ ಜನವರಿಯಲ್ಲಿ ಬೆಣ್ಣಿ ಹಳ್ಳ ಮತ್ತು ತುಪ್ಪರಿ ಹಳ್ಳದ ಎರಡು ಕಾಮಗಾರಿಗಳು ಪ್ರಾರಂಭವಾದರೆ ಬಹುತೇಕ ಮುಂದೆ ಬರುವ ಮಳೆಗಾಲದಲ್ಲಿ ನವಲಗುಂದಕ್ಕೆ ಮಳೆಯಿಂದಾಗಿ ಪ್ರವಾಹ ಬರುವ ಸಮಸ್ಯೆ ಆಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ವಿವಿಧ ಗ್ರಾಮಗಳಲ್ಲಿ ಮಳೆಹಾನಿ ವೀಕ್ಷಣೆ: ನವಲಗುಂದ ವಿಧಾನಸಭಾ ಮತಕ್ಷೆತ್ರ ವ್ಯಾಪ್ತಿಯ ಹುಬ್ಬಳ್ಳಿ ತಾಲೂಕಿನ ಹೆಬಸೂರ ಸಮೀಪದ ನಿಗರಿ ಹಳ್ಳದ ಸೇತುವೆ, ಬಾಲಕರ ಮತ್ತು ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಗಿರುವ ಮಳೆ ಹಾನಿ, ಕೆಸರು, ಅವ್ಯವಸ್ಥೆಗಳ ಕುರಿತು ಸಂತೋಷ್ ಲಾಡ್ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ್ ಪಾಟೀಲ್, ಅಪರ ಜಿಲ್ಲಾಧಿಕಾರಿ ಗೀತಾ, ತಹಶೀಲ್ದಾರ್‍ಗಳಾದ ಜೆ.ಬಿ.ಮಜ್ಜಗಿ, ಸುಧೀರ್ ಸಾಹುಕಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಉಪನಿರ್ದೇಶಕ ಸಂದೀಪ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಾಗೀದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಧಾರವಾಡದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಚರಂಡಿ ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದ ಹುಸೇನ್ ಮೆಹಬೂಬ್ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ, ಸಾಂತ್ವನ ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಸರಕಾರದ ವತಿಯಿಂದ 5 ಲಕ್ಷ ರೂ.ಪರಿಹಾರದ ಚೆಕ್ ಅನ್ನು ವಿತರಿಸಿದರು. ಈ ವೇಳೆ ಶಾಸಕ ಎನ್.ಎಚ್.ಕೋನರೆಡ್ಡಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.







