ಸೌಹಾರ್ದತೆ ಮತ್ತು ಸಾಮರಸ್ಯದಿಂದ ಅಭಿವೃದ್ಧಿ ಸಾಧ್ಯ : ಸಲೀಂ ಅಹ್ಮದ್

ಹುಬ್ಬಳ್ಳಿ : ಸಮಾಜಗಳ ಅಭಿವೃದ್ಧಿ ಕೋಮು ಸೌಹಾರ್ದತೆ ಮತ್ತು ಸಾಮಾಜಿಕ ಸಾಮರಸ್ಯದಿಂದ ಮಾತ್ರ ಸಾಧ್ಯ ಎಂದು ಪರಿಷತ್ತಿನ ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರು ಇಂದಿಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಹಳೆ ಹುಬ್ಬಳ್ಳಿಯ ಹಳೆ ಈದ್ಗಾ ಮೈದಾನದಲ್ಲಿ ಕರ್ನಾಟಕ ಸೂಫಿ ಸಂತರ ಸೌಹಾರ್ದ ವೇದಿಕೆ ವತಿಯಿಂದ ಸೂಫಿ ಹಾಗೂ ಸಂತರ ಸಮಾವೇಶ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿರಹಟ್ಟಿಯ ಫಕೀರೇಶ್ವರ ಮಠ, ಹುಬ್ಬಳ್ಳಿಯ ಫತೇಶಾವಲಿ ದರ್ಗಾ, ಸಿದ್ಧಾರೂಢ ಮಠ ಸೇರಿದಂತೆ ಅನೇಕ ಮಠ-ಮಂದಿರಗಳು ಭಾವೈಕ್ಯತೆಗೆ ಸಾಕ್ಷಿ ಆಗಿವೆ ಎಂದು ನುಡಿದರು.
ಎಲ್ಲ ಧಾರ್ಮಿಕ ಸಂದೇಶಗಳಿಂತ ಸೂಫಿ ಸಂತರ ಸಂದೇಶ ಸೌಹಾರ್ದ ಬದುಕಿಗೆ ಮಾರ್ಗದರ್ಶಕ ಆಗಿದೆ. ಶಾಂತಿಯಿಂದ ಬದುಕುತ್ತಾ ಜೀವನ ನಡೆಸುತ್ತಿರುವ ಎಲ್ಲ ವರ್ಗದ ಜನ ಸೂಫಿ ಸಂತರ ಸಂದೇಶ ಎಲ್ಲ ಕಾಲಕ್ಕೂ ಅನ್ವಯ ಆಗುತ್ತಿದೆ. ಸರಳ ತತ್ವ, ವಿಚಾರಗಳ ಮೂಲಕ ಸಹೋದರತ್ವ ಹಾಗೂ ಭಾವೈಕ್ಯ ಬೆಸೆದವರು ಸೂಫಿ ಸಂತರು. ಎಂದಿಗಿಂತಲೂ ಇಂದು ಈ ನಾಡನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ವನ್ನಾಗಿಸಿಕೊಳ್ಳಬೇಕಾದ ಅವಶ್ಯಕತೆ ಎಂದು ಹೇಳಿದರು.
ಈ ವೇಳೆ ಸಚಿವರಾದ ಸತೀಶ್ ಜಾರಕಿಹೂಳಿ, ಶಿವಾನಂದ ಪಾಟೀಲ್, ರಹಿಮ್ ಖಾನ್, ಶಿರಹಟ್ಟಿ ಮಠದ ಫಕೀರ ದಿಂಗಾಲೇಶ್ವರ ಸ್ವಾಮಿಗಳು, ಸವಣೂರಿನ ದೊಡ್ಡ ಹುಣಿಸಿಮರದ ಮಠದ ಸ್ವಾಮಿ, ಸಂಸದ ನಾಸೀರ್ ಹುಸೇನ್, ತೆಲಂಗಾಣ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಅಜುರುದ್ಧಿನ್, ಶಾಸಕರಾದ ಜಿ.ಎಸ್.ಪಾಟೀಲ್, ಎನ್.ಎಚ್.ಕೋನರೆಡ್ಡಿ ಸೇರಿದಂತೆ ಇನ್ನಿತರರು ಹಾಜರಿದ್ದರು.







