ʼಧರ್ಮಸ್ಥಳ ʼ ಡಿ.ಕೆ.ಶಿವಕುಮಾರ್ ಎರಡು ದೋಣಿ ಮೇಲೆ ಕಾಲಿಟ್ಟು ಹೋಗುವ ಪ್ರಯತ್ನ ಮಾಡುತ್ತಿದ್ದಾರೆ : ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಧರ್ಮಸ್ಥಳ ವಿಚಾರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಎರಡು ದೋಣಿ ಮೇಲೆ ಕಾಲಿಟ್ಟು ಹೋಗುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದರು.
ಹುಬ್ಬಳ್ಳಿಯ ವರೂರಿನಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಧರ್ಮಸ್ಥಳ ಏನು ಬಿಜೆಪಿಯವರ ಮನೆಯ ಸ್ವತ್ತಲ್ಲ" ಎಂಬ ಡಿಸಿಎಂ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ ಸ್ಥಾನದಲ್ಲಿದ್ದು, ಒಂದೆಡೆ ಎಸ್‌ಐಟಿ ರಚನೆಯಲ್ಲಿ ಪ್ರಮುಖ ಭಾಗವಾಗಿದ್ದರೆ, ಈಗ ಧರ್ಮಸ್ಥಳ ವಿಚಾರದಲ್ಲಿ ಷಡ್ಯಂತ್ರ ನಡೆದಿದೆ ಎನ್ನುತ್ತಿದ್ದಾರೆ. ಹೀಗೆ ಎರೆಡು ದೋಣಿ ಮೇಲೆ ಕಾಲಿಟ್ಟು ಸಾಗುವ ಪ್ರಯತ್ನ ಮಾಡುತ್ತಿದ್ದಾರೆಂದು ಹೇಳಿದರು.
ಸೌಜನ್ಯ ಕೊಲೆ ಪ್ರಕರಣದ ನಂತರ ತನಿಖೆ ಮಾಡುತ್ತೇವೆ ಎಂದಿದ್ಧೀರಿ. ಹಾಗಾಗಿ ನಾವು ಅತ್ಯಂತ ಶಾಂತ ರೀತಿಯಲ್ಲೇ ಇದ್ದೆವು. ಆದರೆ ಈಗ 'ಧರ್ಮಸ್ಥಳ ವಿಚಾರದಲ್ಲಿ ಷಡ್ಯಂತ್ರ ನಡೆದಿದೆ' ಎಂಬ ಹೇಳಿಕೆ ಕೊಟ್ಟವರು ತಾವೇ ಅಲ್ಲವೇ? ತಾವ್ಯಾರ ಬಗ್ಗೆ ಮಾತನಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು.
ಧರ್ಮಸ್ಥಳ ಪ್ರಕರಣದಲ್ಲಿ ಪ್ರಹಸನ ತೀರಾ ಅತಿರೇಖಕ್ಕೆ ಹೋಗುತ್ತಿದೆ. ಹೇಳೋರು-ಕೇಳೋರು ಯಾರೂ ಇಲ್ಲ ಎನ್ನುವ ಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದೆ ಈ ಸರ್ಕಾರ. ಹಾಗಾಗಿ ಬಿಜೆಪಿ ಧರ್ಮದ ಪರ, ಒಂದು ಪವಿತ್ರ ಕ್ಷೇತ್ರದ ಪರ ನಿಂತು ಪ್ರತಿಕ್ರಿಯಿಸುತ್ತಿದೆ ಎಂದು ಸಚಿವರು ಹೇಳಿದರು.
ಕೆಲವರು ಪವಿತ್ರ ಧರ್ಮಸ್ಥಳ ಶ್ರೀಕ್ಷೇತ್ರದ ಬಗ್ಗೆ ತೀರಾ ಅಸಭ್ಯ ರೀತಿ ಮಾತನಾಡುತ್ತಿದ್ದಾರೆ. ಇದುವರೆಗೂ ಅವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ? ಎಂದು ಪ್ರಶ್ನಿಸಿದರು.







