‘ಸ್ಟಿಂಗ್ ಆಪರೇಶನ್’ ಪ್ರಕರಣ ತನಿಖೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹ

ಹುಬ್ಬಳ್ಳಿ : ರಾಜ್ಯದಲ್ಲಿನ ‘ಸ್ಟಿಂಗ್ ಆಪರೇಷನ್’ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.
ಶುಕ್ರವಾರ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಯಾರು ತಪ್ಪು ಮಾಡಿದ್ದಾರೆ ಎಂಬುದನ್ನು ತನಿಖೆ ಮೂಲಕ ಬಹಿರಂಗಪಡಿಸಬೇಕು. ಇದರಲ್ಲಿ ಸತ್ಯ ಹೊರಬರಬೇಕು. ಸ್ಟಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರಕಾರ ಎಸ್ಐಟಿ ತನಿಖೆ ನಡೆಸಲಿ ಎಂದು ಹೇಳಿದರು
ಸ್ಟಿಂಗ್ ಆಪರೇಷನ್ ವಿವಾದದ ಚರ್ಚೆಯಲ್ಲಿ ತನಿಖೆಗಿಂತ ಚಿತ್ರೀಕರಣ ಮಾಡಿದವರು ಯಾರೆಂಬ ವಿಚಾರಕ್ಕೇ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆದರೆ, ನ್ಯಾಯ ಸಮ್ಮತ ತನಿಖೆಯಿಂದ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕು ಎಂದು ಅವರು ಹೇಳಿದರು.
ಬೆಲೆ ಏರಿಕೆ ವಿರುದ್ಧ ವಾಗ್ದಾಳಿ: ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದಲ್ಲಿ ಹಾಲು, ಡಿಸೇಲ್, ಸಾರಿಗೆ ಹಾಗೂ ವಿವಿಧ ಪ್ರಮಾಣ ಪತ್ರಗಳ ಶುಲ್ಕ ಸೇರಿದಂತೆ ಹಲವು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಸರಕಾರ ನೀಡುತ್ತಿರುವ ಆರ್ಥಿಕ ನೆರವಿನ ಲಾಭವನ್ನು ಬೆಲೆ ಏರಿಕೆ ಮೂಲಕ ಜನರಿಂದಲೇ ವಸೂಲಿ ಮಾಡುತ್ತಿದೆ ಈ ಸರಕಾರ ಎಂದು ಅವರು ಕಿಡಿ ಕಾರಿದರು.




