ಎಸ್‌ಐಆರ್ ರದ್ದತಿ, ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ

ಹುಬ್ಬಳ್ಳಿ: ದೇಶಾದ್ಯಂತ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ನಡೆಯುತ್ತಿರುವ ಹೋರಾಟದ ಹಿನ್ನೆಲೆಯಲ್ಲಿ, ಸಮತಾ ಸೇನಾ-ಎದ್ದೇಳು ಕರ್ನಾಟಕ ಹಾಗೂ ಪ್ರಗತಿಪರ ಪಕ್ಷಗಳು ಮತ್ತು ಸಂಘಟನೆಗಳ ನೇತೃತ್ವದಲ್ಲಿ ರವಿವಾರ ರಾತ್ರಿ ಹುಬ್ಬಳ್ಳಿಯಲ್ಲಿ ಮೇಣದಬತ್ತಿ ಹಚ್ಚಿ ಶ್ರದ್ಧಾಂಜಲಿ ಪ್ರತಿಭಟನೆ ನಡೆಸಲಾಯಿತು.
ಕಳೆದ ಒಂದು ವರ್ಷದಿಂದ ಈ ಸಂಘಟನೆಗಳ ನೇತೃತ್ವದಲ್ಲಿ ಎಸ್‌ಐಆರ್ ವಿರುದ್ಧ ನಿರಂತರ ಪ್ರತಿರೋಧ ಹೋರಾಟ ನಡೆಯುತ್ತಿದೆ. ಈ ಹೋರಾಟಕ್ಕೆ ಸಂಬಂಧಿಸಿದಂತೆ ದೆಹಲಿಗೆ ತೆರಳಿದ್ದ ಯುವಕರನ್ನು ಅಕ್ರಮವಾಗಿ ಬಂಧಿಸಿರುವುದು, ಸಾರಿಗೆ ಸಂಪರ್ಕವನ್ನು ಕಡಿತಗೊಳಿಸಿರುವುದು, ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಇಂಟರ್ನೆಟ್ ಸ್ಥಗಿತಗೊಳಿಸಿರುವುದು ಹಾಗೂ 65 ಸಾವಿರ ಪೊಲೀಸರನ್ನು ನಿಯೋಜಿಸಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು ಎಂದು ಸಂಘಟಕರು ತಿಳಿಸಿದರು.
ಕೇಂದ್ರ ಸರ್ಕಾರದ ಆಡಳಿತಾತ್ಮಕ ದಬ್ಬಾಳಿಕೆ, ಪ್ರತಿಭಟನಾಕಾರರ ಮೇಲಿನ ಹಲ್ಲೆ ಮತ್ತು ದೌರ್ಜನ್ಯ ಹಾಗೂ ಮಾಧ್ಯಮ ಪ್ರತಿನಿಧಿಗಳ ಅಕ್ರಮ ಬಂಧನದ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಎದುರಿನಿಂದ ಮೇಣದಬತ್ತಿಗಳನ್ನು ಹಿಡಿದು ಆರಂಭವಾದ ಶ್ರದ್ಧಾಂಜಲಿ ಯಾತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಜ್ಞಾನೇಶ್ ಕುಮಾರ್ ಅವರ ಭಾವಚಿತ್ರಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಬಳಿಕ ಪ್ರಧಾನ ಅಂಚೆ ಕಚೇರಿಯ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಯವರೆಗೆ ಯಾತ್ರೆ ನಡೆಸಲಾಯಿತು. ಈ ಸಂದರ್ಭದಲ್ಲಿ ಎಸ್‌ಐಆರ್ ರದ್ದುಗೊಳಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ನಾಗರಿಕ ಮತ ಕಾವಲು ಸಮಿತಿಯ ಸದಸ್ಯರು ಹಾಗೂ ಪ್ರಗತಿಪರ, ದಲಿತಪರ ಮತ್ತು ಕನ್ನಡಪರ ಸಂಘ-ಸಂಸ್ಥೆಗಳು ಹಾಗೂ ವಿವಿಧ ಪಕ್ಷಗಳ ಪ್ರಮುಖರು ಭಾಗವಹಿಸಿ ಬೆಂಬಲ ಸೂಚಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಗುರುನಾಥ ಉಳ್ಳಿಕಾಶಿ, ರಜನಿ ಬಿಜವಾಡ, ಶ್ರೀನಿವಾಸ ಬೆಳದಡಿ, ಪ್ರಭು ಪ್ರಭಾಕರ, ಚೇತನ ಬಿಜವಾಡ, ಶ್ರೀಶೈಲ ಚಲವಾದಿ, ಪಚ್ಚು, ರಘು ಬಸವಂತಕರ, ಮಂಜುಳಾ ಬೆಣಗಿ, ಅಕ್ಕಮ್ಮ ಕಾಂಬಳೆ, ಇಮ್ತಿಯಾಜ್ ಬಿಜಾಪುರ, ಬಾಬರ ಖೋಜೆ, ಲೋಹಿತ ಗಾಮನಗಟ್ಟಿ ಸೇರಿದಂತೆ ನೂರಾರು ಕಾರ್ಯಕರ್ತರು ವಹಿಸಿದ್ದರು.






