ಮನುವಾದಿ ರಾಷ್ಟ್ರವನ್ನಾಗಿಸುವ ಮನಸ್ಥಿತಿಗಳ ವಿರುದ್ಧ ಹೋರಾಡಿ : ಸನತ್‌ಕುಮಾರ ಬೆಳಗಲಿ ಕರೆ

ಹುಬ್ಬಳ್ಳಿ : ಭಾರತದ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಆದರೆ, ಇಂದಿನ ದಿನಗಳಲ್ಲಿ ಪ್ರಜಾಪ್ರಭುತ್ವವನ್ನು ನಾಶಗೊಳಿಸಿ ಮನುವಾದಿ ರಾಷ್ಟ್ರವನ್ನಾಗಿ ನಿರ್ಮಾಣ ಮಾಡುವಲ್ಲಿ ಕೆಲ ಒಳ ಸಂಚಿನ ದುಷ್ಟ ಮನಸ್ಥಿತಿಗಳ ಗುಂಪುಗಳು ವ್ಯವಸ್ಥಿತವಾಗಿ ಕೆಲಸವನ್ನು ಮಾಡುತ್ತಿದೆ. ಸಂಸದೀಯ ವ್ಯವಸ್ಥೆ ಹಾಗೂ ಸಹಬಾಳ್ವೆಯಲ್ಲಿ ನಂಬಿಕೆಯಿರುವ ಶಕ್ತಿಗಳೆಲ್ಲ ಒಂದಾಗಿ ಇದರ ವಿರುದ್ಧ ಹೋರಾಡಬೇಕಿದೆ ಎಂದು ಹಿರಿಯ ಪತ್ರಕರ್ತ ಸನತ್‌ಕುಮಾರ ಬೆಳಗಲಿ ಕರೆ ನೀಡಿದ್ದಾರೆ.
ಗದುಗಿನ ಲಡಾಯಿ ಪ್ರಕಾಶನ, ಧಾರವಾಡದ ಚಿತ್ತಾರ ಕಲಾ ಬಳಗ, ಕವಲಕ್ಕಿಯ ಕವಿ ಪ್ರಕಾಶನ ಹಾಗೂ ಮೇ ಸಾಹಿತ್ಯ ಮೇಳ ಹುಬ್ಬಳ್ಳಿ ಬಳಗದ ಸಹಯೋಗದಲ್ಲಿ ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದ ನರಗುಂದ-ನವಲಗುಂದ ರೈತ ಬಂಡಾಯ ವೇದಿಕೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ 12ನೇ ಮೇ ಸಾಹಿತ್ಯ ಮೇಳದ ಸಾಂವಿಧಾನಿಕ ‘ಪ್ರಜಾಸತ್ತೆಯ ಮೇಲಿನ ದಾಳಿ: ಚಹರೆ ಮತ್ತು ಹೊರದಾರಿಗಳು’ ಗೋಷ್ಠಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ದಿಕ್ಸೂಚಿ ಭಾಷಣ ಮಾಡಿದ ತೆಲುಗು ಸಾಹಿತಿ ಪಾಣಿ ಕರ್ನೂಲ್, ದೇಶದ ಪ್ರಜಾಪ್ರಭುತ್ವವನ್ನು ಮೋದಿ ಪ್ರಭುತ್ವ ಆವರಿಸಿಕೊಳ್ಳುತ್ತಿದೆ. ಬಸವಣ್ಣನಿಂದ ಹಿಡಿದು ಇಂದಿನ ಲೇಖಕರವರೆಗೆ ಸಮಾಜದ ನಿರಂಕುಶ ಪ್ರಭುತ್ವ, ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ದನಿ ಎತ್ತುತ್ತಲೇ ಬಂದಿದ್ದಾರೆ. ನೆಲಮೂಲ ಸಾಹಿತ್ಯ ಯಾವತ್ತೂ ಪ್ರಭುತ್ವಕ್ಕೆ ಮಣಿಯುವುದಿಲ್ಲ. ಈ ರೀತಿ ದನಿ ಎತ್ತುತ್ತಿರುವುದಕ್ಕೆ ನನ್ನ ಮೇಲೆ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪಾಣಿ ವಿವರಿಸಿದರು.
ಪಾಣಿ ಭಾಷೆಗಳನ್ನು ಕನ್ನಡಕ್ಕೆ ಅನುವಾದಿಸಿದ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ, ಭಾರತ ಒಂದು ಧರ್ಮದ ದೇಶವಲ್ಲ, ಭಾರತ ಯಾವುದೋ ಒಂದು ಧರ್ಮದ ಸೊತ್ತಲ್ಲ ಎಂದು ಪ್ರತಿಪಾದಿಸಿದರು.
ಲೇಖಕಿ, ಹೋರಾಟಗಾರ್ತಿ ಕೆ. ನೀಲಾ ಮಾತನಾಡಿ, ಭಾರತದ ಪ್ರಭುತ್ವ ಈಗ ಶ್ರೇಷ್ಠತೆಯ ವ್ಯಸನದಿಂದ ಶ್ರೇಷ್ಠತೆಯ ಸೊಕ್ಕಿಗೆ ತಿರುಗಿದೆ. ಬೆವರಿನ ಲೋಕದಿಂದ ಅರಳಿದ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಇವತ್ತು ಅಪಾಯದಲ್ಲಿದೆ. ಬಸವಣ್ಣ ಪ್ರತಿಪಾದಿಸಿದ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಮುಚ್ಚಿ ಹಾಕುವ ಪ್ರಯತ್ನಗಳು ಇವತ್ತು ನಡೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಪಾಣಿ ಅವರ ಕಾದಂಬರಿ ‘ಶಿಕಾರಿ’ಯನ್ನು ಕನ್ನಡಕ್ಕೆ ಕುಂ. ವೀರಭದ್ರಪ್ಪ ಅನುವಾದಿಸಿದ್ದು, ಕನ್ನಡದ ಅವತರಣಿಕೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ದತ್ತ ಪ್ರಸಾದ್ ದಾಬೋಲ್ಕರ್ ಅವರ ‘ಆರ್.ಎಸ್.ಎಸ್. ಒಳಹೊರಗು’, ಬಂಜಗೆರೆ ಜಯಪ್ರಕಾಶ್ ಅವರ ‘ಪಾಪ ನಿವೇದನೆ’, ರಾಜಕುಮಾರ ಮಡಿವಾಳರ ಅವರ ‘ನೆಲದ ಕಾವ್ಯ-ಮುಗಿಲ ತಾಕಿ’ ಕೃತಿಗಳೂ ಈ ವೇಳೆ ಬಿಡುಗಡೆಯಾದವು.
ಹಿರಿಯ ಪತ್ರಕರ್ತ ಸನತಕುಮಾರ ಬೆಳಗಲಿ, ರೈತ ಹೋರಾಟಗಾರ ಬಿ.ಎಸ್.ಸೊಪ್ಪಿನ, ಮರ್ಯಾದೆ ಹತ್ಯೆ ಪ್ರಕರಣದಲ್ಲಿ ಪತ್ನಿ ಮಾನ್ಯ ಪಾಟೀಲರನ್ನು ಕಳೆದುಕೊಂಡ ವಿವೇಕಾನಂದ ದೊಡ್ಡಮನಿ, ವಸತಿರಹಿತರ ಪರ ಹೋರಾಟಗಾರ್ತಿ ಬೀಬೀಜಾನ್ ಮುಲ್ಲಾ, ಕಾರ್ಮಿಕ ಮಹಿಳೆ ಅಂಜುಮ್ ಬಾಗೇವಾಡಿ, ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಲಿನೆಟ್ ಡಿಸಿಲ್ವ ಅವರು ಭಾರತ ನಕಾಶೆಯ ತುಣುಕುಗಳನ್ನು ಜೋಡಿಸುವುದರ ಮೂಲಕ ಮೇಳಕ್ಕೆ ಚಾಲನೆ ನೀಡಿದರು.
ಕೆ.ಪಿ.ಸುರೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರೀಫ ಬಿಳಿಮಲೆ ಸಂವಿಧಾನ ಪ್ರಸ್ತಾವ ಓದಿದರು. ಪ್ರೊ. ಐ.ಜಿ. ಸನದಿ ಸ್ವಾಗತಿಸಿದರು. ಪಿಚ್ಚಳ್ಳಿ ಶ್ರೀನಿವಾಸ ಹಾಗೂ ಸಂಗಡಿಗರು ಆಶಯ ಗೀತೆ ಹಾಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ರೆವರೆಂಡ್ ಜಾರ್ಜ್ ಫರ್ಡಿನ್ಯಾಂಡ್ ಕಿಟೆಲ್, ಫ.ಗು. ಹಳಕಟ್ಟಿ, ಜಗದೀಶ ಮಂಗಳೂರಮಠ, ಪ್ರಹ್ಲಾದ ಅಗಸನಕಟ್ಟೆ, ಜಿ.ಎಚ್. ರಾಘವೇಂದ್ರ ಸ್ಮಾರಕ ಪುಸ್ತಕ ಮಳಿಗೆಗಳನ್ನು ಮಾನಸ ಉದ್ಘಾಟಿಸಿದರು. ಡಿ.ವಿ. ಹಾಲಭಾವಿ, ಎಂ.ವಿ. ಮಿಣಜಗಿ, ಎಂ. ಜೀವನ, ನೀಲಗಂಗಯ್ಯ ಪೂಜಾರ, ಫಕ್ಕೀರವ್ವ ಗುಡಿಸಾಗರ ‘ಸ್ಮಾರಕ ಚಿತ್ರಕಲಾ ಪ್ರದರ್ಶನ’ ಮಳಿಗೆಯನ್ನು ಶ್ಯಾಮಲಾ ಗುರುಪ್ರಸಾದ ಅವರು ಉದ್ಘಾಟಿಸಿದರು.
ಬಸವರಾಜ ಸೂಳಿಭಾವಿ, ಅನ್ವರ ಮುಧೋಳ, ಲಿಂಗರಾಜ ಅಂಗಡಿ, ವಿ.ಬಿ.ಮಾಗನೂರ ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಹಕ್ಕೊತ್ತಾಯಗಳನ್ನು ಗುರುನಾಥ ಉಳ್ಳಿಕಾಶಿ ಮಂಡಿಸಿದರೆ, ಜಿಲ್ಲಾ ಮಟ್ಟದ ಹಕ್ಕೊತ್ತಾಯಗಳನ್ನು ಮಹೇಶ ಪತ್ತಾರ ಮಂಡಿಸಿದರು. ನಂತರ ಬೆಂಗಳೂರಿನ ‘ಸಹಚಾರಿ’ ನೃತ್ಯ ತಂಡದ ಕಲಾವಿದೆಯರಿಂದ ‘ಸಮತೆಯೆಡೆಗೆ’ ನರ್ತನ ಪ್ರಸ್ತುತಿ ನಡೆಯಿತು.
ಮನುವಾದಿ ಶಕ್ತಿಗಳು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಸಂವಿಧಾನ ನಾಶ ಮಾಡುವ ಹುನ್ನಾರ ಯಶಸ್ವಿಯಾಗಿ ಮಾಡುತ್ತಾ ಬಂದಿದ್ದಾರೆ. ಚುನಾವಣಾ ಆಯೋಗ, ನ್ಯಾಯಾಲಯಕ್ಕೆ ಅವರಿಂದ ಅಪಾಯ ಎದುರಾಗಿದೆ. ಸಂಸದೀಯ ವ್ಯವಸ್ಥೆಯ ಅಡಿಯಲ್ಲಿರುವ ಹಕ್ಕನ್ನು ಒಂದೊಂದಾಗಿ ನಾಶ ಮಾಡುತ್ತಾ ಬಂದಿದ್ದಾರೆ. ರಾಜಕೀಯವಾಗಿ ಅವರು ಇನ್ನೂ ಯಶಸ್ವಿಯಾಗಿಲ್ಲ. ಅವರಿಂದ ಅಧಿಕಾರ ಕಿತ್ತುಕೊಳ್ಳುವವರೆಗೂ ಅಪಾಯ ತಪ್ಪಿದ್ದಲ್ಲ.
ಸನತ್‌ಕುಮಾರ ಬೆಳಗಲಿ, ಹಿರಿಯ ಪತ್ರಕರ್ತ
ಫ್ಯಾಶಿಸ್ಟ್ ಶಕ್ತಿಗಳು ದೇಶಾದ್ಯಂತ ಅರಾಜಕತೆಯನ್ನು ಸೃಷ್ಟಿಸುತ್ತಿದ್ದಾರೆ. ದಲಿತರು, ಬಹುಜನರು, ಆದಿವಾಸಿಗಳು, ಕಾರ್ಮಿಕರು, ಗೆಲ್ಲುವುದು ಇವರಿಗೆ ಬೇಕಿಲ್ಲ. ಸನಾತನ ಧರ್ಮದ ಹರಡುವಿಕೆಯೇ ಫ್ಯಾಶಿಸ್ಟ್ ಶಕ್ತಿಗಳ ಗುರಿ. ಹಿಂದೂ ಹೆಸರಿನಲ್ಲಿ ಬ್ರಾಹ್ಮಣತ್ವದ ಪ್ರಸಾರ ಅವರ ಗುರಿ. ಎಸ್‌ಐಆರ್ ಹೆಸರಿನಲ್ಲಿ ಅನ್ಯ ಧರ್ಮದ, ಅನ್ಯ ವಿಚಾರಧಾರೆಯ ಮತದಾರರನ್ನು ಮತದಾನದಿಂದ ಹೊರಗಿಡುವುದು ಅವರ ಯೋಜನೆಯಾಗಿದೆ.
ಪಾಣಿ ಕರ್ನೂಲ್, ತೆಲುಗು ಸಾಹಿತಿ
ಪಶ್ಚಿಮ ಬಂಗಾಳದಲ್ಲಿ 90 ಲಕ್ಷಕ್ಕೂ ಹೆಚ್ಚಿನ ಜನರನ್ನು ಮತದಾರರ ಪಟ್ಟಿಯಿಂದ ಕಿತ್ತಸೆಯಲಾಗಿದೆ. ಈಗ ಕರ್ನಾಟಕದಲ್ಲಿ ಆ ಪ್ರಯತ್ನ ಶುರುವಾಗಿದೆ. ಎಸ್‌ಐಆರ್ ಅನ್ನು ಕೂಡಲೇ ನಿಲ್ಲಿಸುವಂತೆ ಎಲ್ಲರೂ ಹೋರಾಟ ಮಾಡಬೇಕಿದೆ. ಮೀಸಲಾತಿಯಲ್ಲಿ ಎಡಗೈ-ಬಲಗೈ ಎಂದು ಜಗಳ ಹಚ್ಚಿ ಮೀಸಲಾತಿಯನ್ನೇ ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ.
ಕೆ. ನೀಲಾ, ಹೋರಾಟಗಾರ್ತಿ
ಹಕ್ಕೊತ್ತಾಯಗಳ ಮಂಡನೆ
ಹುಬ್ಬಳ್ಳಿ: ಶನಿವಾರ ಆರಂಭವಾದ 12ನೇ ಮೇ ಸಾಹಿತ್ಯ ಮೇಳದಲ್ಲಿ ರಾಜ್ಯಕ್ಕೆ ಸಂಬಂಧಿಸಿದಂತೆ ಒಂಭತ್ತು ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು. ಅವುಗಳಿಗೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು.
* ನಾಗರಿಕ ಪೌರತ್ವ ತೀರ್ಮಾನ ಮಾಡುವ ಹಕ್ಕು ಚುನಾವಣಾ ಆಯೋಗಕ್ಕೆ ಇಲ್ಲದಿದ್ದರೂ, ಎಸ್‌ಐಆರ್ ಮೂಲಕ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಪೌರತ್ವ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದಕ್ಕೆ ಮೇ ಸಾಹಿತ್ಯ ಮೇಳ ಅವಕಾಶ ನೀಡುವುದಿಲ್ಲ.
* 67,662 ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ 25,685 ಶಾಲೆಗಳನ್ನು ಮುಚ್ಚಿ ಕೆಬಿಎಸ್, ಮ್ಯಾಗ್ನೆಟ್ ಶಾಲೆಗಳನ್ನು ತೆರೆಯಲು ರಾಜ್ಯ ಸರಕಾರ ನಿರ್ಧರಿಸಿರುವುದನ್ನು ಮೇಳ ವಿರೋಧಿಸುತ್ತದೆ. ಕನ್ನಡ ಶಾಲೆಗೆಗಳಿಗೆ ಮೂಲಸೌಲಭ್ಯ ಕಲ್ಪಿಸಿ, ಅಭಿವೃದ್ಧಿಪಡಿಸಬೇಕು.
* ಒಳಮೀಸಲಾತಿ ಸ್ವಾಗತಾರ್ಹ. ಅದರಲ್ಲಿ ಅಲೆಮಾರಿ ಸಮುದಾಯಗಳಿಗೆ ಶೇ 1 ಮೀಸಲಾತಿ ಕಲ್ಪಿಸಲೇಬೇಕು. ಈ ಮೀಸಲಾತಿ ಕೇವಲ ಪರಿಶಿಷ್ಟ ಜಾತಿಗೆ ಸೀಮಿತವಾಗಿಸದೆ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳಿಗೂ ಅನ್ವಯಿಸಬೇಕು.
* ರೈತ ವಿರೋಧಿ ಮೂರು ಕಾಯ್ದೆಯನ್ನು ಕೇಂದ್ರ ಸರಕಾರ ಹಿಂಪಡೆದಿದ್ದರೂ, ರಾಜ್ಯ ಸರಕಾರ ಅವುಗಳನ್ನು ಅಂಗೀಕರಿಸಿದೆ. ತಕ್ಷಣ ರಾಜ್ಯ ಸರಕಾರ ಇವುಗಳನ್ನು ಹಿಂಪಡೆಯಬೇಕು.
* ರಾಜ್ಯವನ್ನು ಗುಡಿಸಲು ಮುಕ್ತವಾಗಿಸಲು, ಸರಕಾರ ಕೂಡಲೇ ಸಮೀಕ್ಷೆ ಮಾಡಿ ಎಲ್ಲ ಕುಟುಂಬದವರಿಗೂ ಮನೆ ನಿರ್ಮಿಸಿಕೊಡಬೇಕು. ಕ್ರಿಯಾಯೋಜನೆ ರೂಪಿಸಬೇಕು.
* ಭೂ ಸುಧಾರಣಾ ಕಾಯ್ದೆ ವ್ಯಾಜ್ಯ ಇನ್ನೂ ಜೀವಂತವಾಗಿದ್ದು, ಸರಕಾರ ನೀತಿ ಸಂರಕ್ಷಣೆಗೆ ನೂತನ ಕಾಯ್ದೆ ಜಾರಿಗೆ ತರಬೇಕು. ಭೂಮಿ ಪಡೆದ ರೈತರ ಹಿತ ಕಾಪಾಡಬೇಕು.
* ರಾಜ್ಯದಲ್ಲಿ ದ್ವಿ ಭಾಷ ನೀತಿ ಜಾರಿಗೆ ಮುಂದಾಗಬೇಕು. ಕೇಂದ್ರ ಸರಕಾರ ರಾಜ್ಯದ ಮೇಲೆ ಹಿಂದಿ ಹೇರಿಕೆ ಮಾಡುವುದನ್ಜು ನಿಲ್ಲಿಸಬೇಕು.
* ಕೈಗಾರಿಕೆಗಳಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮ ವಿರೋಧಿಸಿ ಕೊಪ್ಪಳದಲ್ಲಿ ನಡೆದಿರುವ ’ಕೊಪ್ಪಳ ಬಚಾವೋ’ ಆಂದೋಲನವನ್ನು ಮೇಳ ಬೆಂಬಲಿಸುತ್ತದೆ. ಬೃಹತ್ ಕೈಗಾರಿಕೆ ವಿಸ್ತರಣೆಗೆ ಸರಕಾರ ಅನುಮತಿ ನೀಡಬಾರದು.
* ಸಂಜೆ 7 ಗಂಟೆ ನಂತರ ಸಾರ್ವಜನಿಕ ರಸ್ತೆ, ಸ್ಥಳಗಳಲ್ಲಿ ಧಾರ್ಮಿಕ ಮೆರವಣಿಗೆಗೆ ಅನುಮತಿ ನೀಡಬಾರದು. ಡಿಜೆ ಬಳಕೆಗೆ ಅನುಮತಿ ನೀಡದಿರುವ ಕಾಯ್ದೆ ಜಾರಿಗೆ ತರಬೇಕು. ಸರಕಾರಿ ಕಚೇರಿ, ಶಾಲಾ ಆವರಣ, ಪಾರ್ಕ್ಗಳಲ್ಲಿ ಸಂಘ, ಸಂಸ್ಥೆಗಳು ಧಾರ್ಮಿಕ ಕಾರ್ಯಕ್ರಮ ಮಾಡುವುದನ್ನು ನಿಷೇಧಿಸಬೇಕು.
ಮುಖಂಡ ಗುರುನಾಥ ಉಳ್ಳಿಕಾಶಿ ಹಕ್ಕೊತ್ತಾಯ ಮಂಡಿಸಿದರು.






