ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಆರೋಪ | ಪೊಲೀಸರು ಯಾವುದೇ ತಪ್ಪು ಮಾಡಿಲ್ಲ : ಸಂತೋಷ್ ಲಾಡ್

ಹುಬ್ಬಳ್ಳಿ : ನಗರದ ಕೇಶ್ವಾಪುರದ ಚಾಲುಕ್ಯ ನಗರದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯನ್ನು ವಶಕ್ಕೆ ಪಡೆಯಲು ಹೋದಾಗ ಅವರೇ ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ತಾವೇ ವಿವಸ್ತ್ರಗೊಂಡು ಗಲಾಟೆ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಹುಬ್ಬಳ್ಳಿ ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿರುವ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ನಗರದಲ್ಲಿ ಪ್ರತಿಕ್ರಿಯಿಸಿದ ಸಚಿವರು, ಈ ಘಟನೆ ಬಗ್ಗೆ ನಾನು ಮತ್ತು ಜಿಲ್ಲಾಧಿಕಾರಿಯವರು ಪೊಲೀಸ್ ಆಯುಕ್ತರಲ್ಲಿ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇವೆ. ಮತದಾರರ ವಿಶೇಷ ಪರಿಷ್ಕರಣೆ ಕಾರ್ಯ ವೇಳೆ ಗಲಾಟೆ ಆಗಿದ್ದು ನಿಜ. ಆ ಸಂಬಂಧ ಆಕೆಯನ್ನು ಬಂಧಿಸಲು ತೆರಳಿದ್ದಾಗ ಮಹಿಳಾ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿರುವ ದಾಖಲೆಗಳು ನಮ್ಮ ಹತ್ತಿರ ಇವೆ. ಇದರಲ್ಲಿ ಪೊಲೀಸ್ ಇಲಾಖೆಯ ಯಾವ ತಪ್ಪೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮಹಿಳೆಯನ್ನು ವಶಕ್ಕೆ ಪಡೆಯಲು ಹೋದಾಗ ಸೆರೆಯಾದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದ್ದು, ಅದನ್ನು ನೋಡಿದಾಗ ಯಾರಿಗಾದರೂ ಮಹಿಳೆ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂದೆನಿಸುತ್ತದೆ. ಆದರೆ, ವಿಷಯದ ಸತ್ಯಾಸತ್ಯತೆ ಮರೆಮಾಚಿ, ಪೊಲೀಸರ ಮೇಲೆ ಆರೋಪಿಸಲಾಗುತ್ತದೆ. ಮಾಧ್ಯಮಗಳು ಮತ್ತು ಸಾರ್ವಜನಿಕರು ವಾಸ್ತವ ಅರಿತುಕೊಳ್ಳಬೇಕೆಂದು ಸಚಿವರು ಮನವಿ ಮಾಡಿದರು.





