ಹುಬ್ಬಳ್ಳಿ-ಧಾರವಾಡ ಪಾಲಿಕೆಯ ‘ಧೀಮಂತ ಸನ್ಮಾನ-2026’ ಪ್ರಶಸ್ತಿಗೆ ಸಾಧಕರ ಆಯ್ಕೆ

ಹುಬ್ಬಳ್ಳಿ: ಕರ್ನಾಟಕ ರಾಜ್ಯೋತ್ಸವ-2026ರ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಧೀಮಂತ ಸನ್ಮಾನ-2026’ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಸಾಧಕರನ್ನು ಆಯ್ಕೆ ಮಾಡಲಾಗಿದೆ.
ಪಾಲಿಕೆಯ ಮಹಾಪೌರರಾದ ದುರ್ಗಮ್ಮ ಶಶಿಕಾಂತ ಬೆಜವಾಡ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಆಯ್ಕೆ ಸಮಿತಿಯು ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಿ, ಸಾಧಕರ ಸೇವೆ ಹಾಗೂ ಕೊಡುಗೆಗಳನ್ನು ಪರಿಗಣಿಸಿ ಸರ್ವಾನುಮತದಿಂದ ಆಯ್ಕೆ ಮಾಡಿದೆ.
ಆಯ್ಕೆ ಸಮಿತಿಯಲ್ಲಿ ಉಪ ಮಹಾಪೌರರಾದ ರತ್ನಾಬಾಯಿ ಏಕನಾಥ ನಾಝರೆ, ವಿರೋಧ ಪಕ್ಷದ ನಾಯಕ ಮಹಮ್ಮದ್ ಇಲಿಯಾಸ್ ಮನಿಯಾರ್, ಪಾಲಿಕೆ ಸದಸ್ಯರಾದ ಶಿವಾನಂದ ಹಿರೇಮಠ, ತಿಪ್ಪಣ್ಣ ಮಜ್ಜಗಿ, ದೊರೆರಾಜ ಮನ್ನೆಕುಂಟ್ಲ, ಸಂತೋಷ ಚವ್ಹಾಣ, ಆರೀಫ್ ಭದ್ರಾಪೂರ ಸದಸ್ಯರಾಗಿದ್ದು, ಪಾಲಿಕೆಯ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ ಸದಸ್ಯ ಕಾರ್ಯದರ್ಶಿಗಳಾಗಿದ್ದರು.
27 ಕ್ಷೇತ್ರಗಳ ಸಾಧಕರಿಗೆ ಗೌರವ
ಶಿಕ್ಷಣ, ಸಾಹಿತ್ಯ, ಸಂಗೀತ, ವೈದ್ಯಕೀಯ, ಕೈಗಾರಿಕೆ, ಸಂಶೋಧನೆ, ಎನ್‌ಜಿಒ ಹಾಗೂ ಸಂಘ-ಸಂಸ್ಥೆಗಳು, ತಾಂತ್ರಿಕ, ಜಾನಪದ, ಕನ್ನಡಪರ ಹೋರಾಟ, ವಿಶೇಷ ಚೇತನರು, ಯೋಗ, ಪತ್ರಿಕೋದ್ಯಮ, ಛಾಯಾಗ್ರಹಣ, ಕೃಷಿ, ಪೌರಕಾರ್ಮಿಕರು, ಹಸಿರು ಪರಿಸರ, ಚಿತ್ರಕಲೆ, ರಂಗಭೂಮಿ, ಕ್ರೀಡೆ, ಸೇವೆ, ನೃತ್ಯ, ಸಾಮಾಜಿಕ ಸೇವೆ, ಬಾಲಪ್ರತಿಭೆ ಹಾಗೂ ವಿಶೇಷ ಸಾಧನೆ ಸೇರಿದಂತೆ ಒಟ್ಟು 27 ಕ್ಷೇತ್ರಗಳಲ್ಲಿ ಸಾಧಕರನ್ನು ಗುರುತಿಸಲಾಗಿದೆ.
ಪತ್ರಿಕೋದ್ಯಮ ಕ್ಷೇತ್ರದಲ್ಲಿ 9 ಮಂದಿಗೆ ಗೌರವ
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಧುಕೇಶ್ವರ ಪಿ. ಯಾಜಿ, ಮಂಜುನಾಥ ಅಂಗಡಿ, ದೀಪಕ್ ತಳವಾಯಿ, ಶಿವಾನಂದ ಗೊಂಬಿ, ಸುಧೀಂದ್ರ ಸತ್ಯಬೋಧಿ ಹುಲಗೂರ, ಪರಶುರಾಮ ಜಿ. ತಹಶೀಲ್ದಾರ, ಹೇಮರೆಡ್ಡಿ ಮಲ್ಲಪ್ಪ ಸೈದಾಪೂರ, ರವೀಶ ಪವಾರ ಹಾಗೂ ಕಾಶಪ್ಪ ಕರದಿನ ಸೇರಿದಂತೆ ಒಂಭತ್ತು ಮಂದಿ ಆಯ್ಕೆಯಾಗಿದ್ದಾರೆ.
ಛಾಯಾಗ್ರಹಣ ಕ್ಷೇತ್ರದಲ್ಲಿ ಗೋವಿಂದರಾಜ ಜವಳಿ, ಬಸವರಾಜ ಅಳಗವಾಡಿ, ಸದ್ದಾಂ ಮುಲ್ಲಾ ಅವರಿಗೆ ಪ್ರಶಸ್ತಿ ಲಭಿಸಿದೆ.
ಕ್ರೀಡೆ, ಸಾಹಿತ್ಯ, ಬಾಲಪ್ರತಿಭೆಗೆ ಮನ್ನಣೆ
ಕ್ರೀಡಾ ಕ್ಷೇತ್ರದಲ್ಲಿ ಕಮಲಾ ಮಿಂಗಲ್ ಸಿದ್ದಿ, ಸಯ್ಯದ ಸಬೀರ, ಅಭಿಜೀತ ಬೆಂಗೇರಿ ಸೇರಿದಂತೆ ಎಂಟು ಸಾಧಕರು, ಸಾಹಿತ್ಯ ಕ್ಷೇತ್ರದಲ್ಲಿ ಡಾ. ಜಿನದತ್ತ ಅ. ಹಡಗಲಿ, ವೆಂಕಟೇಶ ಕೃಷ್ಣಾಜಿ ಮರೇಗುದ್ದಿ ಹಾಗೂ ಶ್ರೀನಿವಾಸ ವಾಡಪ್ಪಿ ಹಾಗೂ ಬಾಲಪ್ರತಿಭೆಗಳಾದ ಆರಾಧನಾ ಸಂಧೀಲಕುಮಾರ, ಮಿಲನ ಎಸ್. ಭಟ್, ಕೃಷ್ಣಮೂರ್ತಿ ಸಂತೋಷ ಕಟ್ಟಿಮನಿ, ನಿಖಿತಾ ರಾಜು ನಲವಡಿ ಹಾಗೂ ಆರ್ಯನ ಕಿ. ಶೆಟ್ಟರ ಅವರನ್ನು ಆಯ್ಕೆ ಮಾಡಲಾಗಿದೆ.
ಇದರೊಂದಿಗೆ ಸಂಗೀತ, ವೈದ್ಯಕೀಯ, ಶಿಕ್ಷಣ, ಕೃಷಿ, ಜಾನಪದ, ಸಾಮಾಜಿಕ ಹಾಗೂ ಸೇವಾ ಕ್ಷೇತ್ರಗಳಲ್ಲಿಯೂ ಹಲವು ಗಣ್ಯರು ಮತ್ತು ಸಂಸ್ಥೆಗಳಿಗೆ ಪ್ರಶಸ್ತಿ ಘೋಷಿಸಲಾಗಿದೆ.
ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ, ಪ್ರತಿಭೆ ಹಾಗೂ ಸಾಧನೆಯ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದವರನ್ನು ಗುರುತಿಸಿ ಗೌರವಿಸುವುದೇ ಈ ಪ್ರಶಸ್ತಿಯ ಮುಖ್ಯ ಉದ್ದೇಶವಾಗಿದೆ.






