ಹುಬ್ಬಳ್ಳಿಯಲ್ಲಿ ಸರಣಿ ಅಪಘಾತ: ಆಟೋ ಜಖಂ, ಚಾಲಕನಿಗೆ ಗಾಯ

ಹುಬ್ಬಳ್ಳಿ: ನಗರದ ಸರ್ ಸಿದ್ದಪ್ಪ ಕಂಬಳಿ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಆಟೋ ಚಾಲಕ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಆಟೋದಲ್ಲಿದ್ದ ಇಬ್ಬರು ವಯೋವೃದ್ಧ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರಿನ ಚಾಲಕ ಏಕಾಏಕಿ ಅಡ್ಡ ಬಂದ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಬಸ್ ಚಾಲಕ ದಿಢೀರ್ ಬ್ರೇಕ್ ಹಾಕಿದ್ದಾನೆ. ಈ ವೇಳೆ ಹಿಂಬದಿಯಿಂದ ಬಂದ ಬಿಆರ್ಟಿಎಸ್ ಬಸ್ ಕೆಎಸ್ಸಾರ್ಟಿಸಿ ಬಸ್ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಬಿಆರ್ ಟಿಎಸ್ ಬಸ್ನ ಮುಂಭಾಗದ ಗಾಜು ಒಡೆದಿದೆ. ಇದೇ ವೇಳೆ ಬಿಆರ್ಟಿಎಸ್ ಬಸ್ನ ಹಿಂಬದಿಯಲ್ಲಿ ಬರುತ್ತಿದ್ದ ಆಟೋ ಕೂಡ ಢಿಕ್ಕಿ ಹೊಡೆದಿದ್ದು, ಆಟೋದ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಘಟನೆಯಲ್ಲಿ ಆಟೋ ಚಾಲಕನ ತಲೆಗೆ ಗಾಯಗಳಾಗಿವೆ.
ಅಪಘಾತ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಡಂಗನವರ ಅವರು ತಕ್ಷಣ ಗಾಯಾಳು ಆಟೋ ಚಾಲಕನಿಗೆ ಪ್ರಾಥಮಿಕ ಉಪಚಾರ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು.
ಇದೇ ವೇಳೆ ಈ ರಸ್ತೆಯಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿದ್ದು, ಸಂಚಾರ ಪೊಲೀಸರು ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಅಪಘಾತಗಳನ್ನು ತಡೆಗಟ್ಟಬೇಕು ಎಂದು ಅವರು ಒತ್ತಾಯಿಸಿದರು.




