ಧಾರವಾಡದಿಂದ ಇಬ್ಬರು ಶಾಲಾ ಮಕ್ಕಳ ಅಪಹರಣ: ಉತ್ತರ ಕನ್ನಡ ಜಿಲ್ಲೆಯಲ್ಲಿ ಆರೋಪಿಯ ಬಂಧನ

ಧಾರವಾಡ: ನಗರದ ಕಮಲಾಪುರ ಬಡಾವಣೆಯ ಸರಕಾರಿ ಪ್ರಾಥಮಿಕ ಶಾಲೆಯ ಇಬ್ಬರು ವಿದ್ಯಾರ್ಥಿಗಳನ್ನು ಸೋಮವಾರ ಅಪಹರಿಸಿ ಕರೆದೊಯ್ದ ವ್ಯಕ್ತಿಯೊಬ್ಬ ಉತ್ತರ ಕನ್ನಡ ಜಿಲ್ಲೆಯ ಜೋಯ್ಡಾದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.
ಹುಬ್ಬಳ್ಳಿ ಮೂಲದ ಮುಹಮ್ಮದ್ ಕರೀಂ ಮೇಸ್ತ್ರಿ( 49) ಮಕ್ಕಳ ಅಪಹರಣ ಆರೋಪಿಯಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಲಕ್ಷ್ಮೀ ಕರೆಯಪ್ಪನವರ್ ಹಾಗೂ ಅನ್ವರ್ ದೊಡ್ಡಮನಿ ಎಂಬ ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದೆ.
ಘಟನೆ ವಿವರ: ಕಮಲಾಪುರ ಬಡಾವಣೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಮಧ್ಯಾಹ್ನ ಊಟ ಮಾಡಿ ಆಟ ಆಡುತ್ತಿದ್ದ 3ನೇ ತರಗತಿ ವಿದ್ಯಾರ್ಥಿಗಳಾದ ಲಕ್ಷ್ಮೀ ಕರೆಯಪ್ಪನವರ್ ಹಾಗೂ ಅನ್ವರ್ ದೊಡ್ಡಮನಿ ಎಂಬವರನ್ನು ಆರೋಪಿ ಕರೀಂ ಮೇಸ್ತ್ರಿ ಪುಸಲಾಯಿಸಿ 'ಉಳವಿ ಬಸಪ್ಪ ದೇವಸ್ಥಾನದ ಜಾತ್ರೆಗೆ ಹೋಗೋಣ, ಬರುತ್ತೀರಾ?' ಅಂತಾ ಕೇಳಿದ್ದಾನೆ. ಅದಕ್ಕೆ ಒಪ್ಪಿದ ಇಬ್ಬರು ಮಕ್ಕಳನ್ನು ತನ್ನ ಬೈಕಿನಲ್ಲಿ ಹತ್ತಿಸಿಕೊಂಡ ಅಲ್ಲಿಂದ ಪರಾರಿಯಾಗಿದ್ದಾನೆ.
ಈ ಮಧ್ಯೆ ಇಬ್ಬರು ಮಕ್ಕಳ ಕಾಣೆಯಾಗಿರುವುದನ್ನು ಅರಿತ ಶಿಕ್ಷಕರು ಶಾಲೆಯ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಅಪಹರಣ ಕೃತ್ಯ ಗೊತ್ತಾಗಿದೆ. ತಕ್ಷಣ ಅವರು ಉಪನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಈ ಬಗ್ಗೆ ಎಲ್ಲ ಕಡೆ ಮಾಹಿತಿ ರವಾನಿಸಿದ್ದಾರೆ.
ಅಪಹರಣಕಾರನ ಬೈಕ್ ಅಪಘಾತ: ಮಕ್ಕಳನ್ನು ಅಪಹರಿಸಿದ್ದ ಆರೋಪಿ ಕರೀಂ ಮೇಸ್ತ್ರಿ, ಉತ್ತರ ಕನ್ನಡ ಜಿಲ್ಲೆಯ ಜೋಯ್ಡಾದತ್ತ ಸಾಗುತ್ತಿದ್ದಾಗ ಬೈಕ್ ಅಪಘಾತಕ್ಕೀಡಾಗಿದೆ. ಬೈಕಿನಲ್ಲಿ ಇಬ್ಬರು ಮಕ್ಕಳಿರುವುದನ್ನು ಕಂಡು ಪೊಲೀಸರು ಪ್ರಶ್ನಿಸಿದಾಗ ಅಪಹರಣ ಕೃತ್ಯ ಬಯಲಾಗಿದೆ.
ಅಪಘಾತದಲ್ಲಿ ಗಾಯಗೊಂಡಿರುವ ಕರೀಂ ಮೇಸ್ತ್ರಿ ಗಾಯಗೊಂಡಿದ್ದಾನೆ.
ಆತನನ್ನು ಪೊಲೀಸರು ಬಂಧಿಸಿ, ಮಕ್ಕಳನ್ನು ರಕ್ಷಿಸಿ ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.







