ದೇಶದಲ್ಲಿ ಬಿಜೆಪಿಯಿಂದ ಟಾರ್ಗೆಟ್ ರಾಜಕಾರಣ : ಯು.ಟಿ.ಖಾದರ್

ಧಾರವಾಡ : ರಾಜ್ಯ ಮಾತ್ರವಲ್ಲದೆ ದೇಶದಲ್ಲಿ ಬಿಜೆಪಿಯಿಂದ ಟಾರ್ಗೆಟ್ ರಾಜಕಾರಣ ನಡೆಯುತ್ತಿದ್ದು, ಇದನ್ನು ಯಾಕೆ ಮಾಡಲಾಗುತ್ತಿದೆ ಎಂದು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಚಿವ ಯು.ಟಿ. ಖಾದರ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 100ರಲ್ಲಿ ಶೇ. 88ರಷ್ಟು ಕಾಂಗ್ರೆಸ್ ನಾಯಕರ ಮೇಲೆ ಟಾರ್ಗೆಟ್ ರಾಜಕೀಯ ಆಗುತ್ತಿದೆ. ಬಿಜೆಪಿ ನಾಯಕರ 100 ಕೇಸ್‌ನಲ್ಲಿ ಶೇ. 98ರಷ್ಟು ತಪ್ಪಿಲ್ಲ ಎಂದು ಕೈಬಿಡಲಾಗುತ್ತಿದೆ. ಕೇವಲ ಶೇ. 2ರಷ್ಟು ಶಿಕ್ಷೆ ಆಗುತ್ತಿವೆ. ರಾಜ್ಯದ ಜನರು ಇದನ್ನು ಗಮನಿಸುತ್ತಿದ್ದಾರೆ. ಸಣ್ಣ ಸಮುದಾಯದಿಂದ ಬಂದು ದೊಡ್ಡ ಸ್ಥಾನಕ್ಕೇರಿದ ಸತೀಶ ಜಾರಕಿಹೊಳಿ ಅವರ ಮೇಲೆ ಏಕೆ ಸಿಟ್ಟು ಎಂದು ಬೇಸರ ವ್ಯಕ್ತಪಡಿಸಿದರು.
ಕಲಬೆರಕೆ ಆಹಾರದ ಕುರಿತ ಪ್ರಶ್ನೆಗೆ ಉತ್ತರಿಸುತ್ತಾ, ಹೊಟೇಲ್‌ನವರು ಜನರಿಗೆ ಮೋಸ ಮಾಡದಂತೆ ನೋಡಿಕೊಳ್ಳಲಾಗುತ್ತಿದೆ. ಜನರೂ ಸಹ ಹೊರಗಿನ ಕಟ್ಟಡ ನೋಡದೆ ಗುಣಮಟ್ಟದ ಆಹಾರ ನೋಡಿ ಸೇವನೆ ಮಾಡಬೇಕು. ಜನರು ಸ್ವಚ್ಛತೆ, ಗುಣಮಟ್ಟದ ಬಗೆಗೆ ಮಾಹಿತಿ ನೀಡಿದರೆ ಅಧಿಕಾರಿಗಳು ಪರಿಶೀಲನೆ ಮಾಡುತ್ತಾರೆ ಎಂದರು.
ನಕಲಿ ವೈದ್ಯರ ಕುರಿತು ಮಾತನಾಡುತ್ತಾ, ಈಗಾಗಲೇ ರಾಜ್ಯದೆಲ್ಲೆಡೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ನಕಲಿ ವೈದ್ಯರ ಬಗ್ಗೆ ಮಾಹಿತಿ ನೀಡಿದರೆ ಕಾನೂನು ಕ್ರಮ ಜರುಗಿಸಲಾಗುವುದು. ಒಂದು ವೇಳೆ ನಾನು ದಾಳಿ ಮಾಡಿದಾಗ ನಕಲಿ ವೈದ್ಯರು ಸಿಕ್ಕರೆ ಅಲ್ಲಿಯ ಡಿಎಚ್‌ಒ ಮೇಲೆಯೂ ಕ್ರಮ ಜರುಗಿಸಲಾಗುವುದು. ಕಾರಣ ಅವರ ಗಮನಕ್ಕೆ ಇಲ್ಲದೇ ಜಿಲ್ಲೆಯಲ್ಲಿ ನಕಲಿ ವೈದ್ಯರು ಇರಲು ಸಾಧ್ಯವಿಲ್ಲ ಎಂದರು.
ತಂಬಾಕು ನಿಷೇಧ ಗೊಂದಲ ಏನಿಲ್ಲ. ಪಾನ್ ಮಸಾಲ, ನಿಕೋಟಿನ್ ಮಿಕ್ಸ್ ಬಂದ್ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಚೆನ್ನಾಗಿರುವ ಪಾನ್ ಮಸಾಲೆಗೆ ತೊಂದರೆ ಇಲ್ಲ. ಆದರೆ, ರಿಜೆಕ್ಟ್ ಆಗಿರುವ ಅಡಿಕೆ ಬಳಕೆ ಮಾಡಿದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.






