ವಿನಯ್ ಕುಲಕರ್ಣಿ ಜಾಮೀನು ರದ್ದು; ಹೋರಾಟಕ್ಕೆ ಸಿಕ್ಕ ಜಯ :ಬಸವರಾಜ ಕೊರವರ

ಬಸವರಾಜ ಕೊರವರ
ಧಾರವಾಡ: ಶಾಸಕ ವಿನಯ್ ಕುಲಕರ್ಣಿ ಅವರಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಹೇಳಿದರು.
ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಮಗೆ ನಂಬಿಕೆ ಇತ್ತು. ಸುಪ್ರೀಂ ಕೋರ್ಟ್ ಉತ್ತಮ ಆದೇಶ ನೀಡಿದೆ. ಶಾಸಕರ ಸ್ಥಾನದಲ್ಲಿದ್ದುಕೊಂಡು ರಾಜಕೀಯ ಲಾಭಕ್ಕಾಗಿ ಕೊಲೆ ಮಾಡಿಸಿ, ಅದರಿಂದ ಪಾರಾಗಬಹುದು ಎಂದು ಭಾವಿಸುವವರಿಗೆ ಈ ಆದೇಶ ತಕ್ಕ ಪಾಠವಾಗಿದೆ ಎಂದರು.
ವಿನಯ್ ಕುಲಕರ್ಣಿ ಸೇರಿದಂತೆ ಅವರ 17 ಸಹಚರರ ಜಾಮೀನು ಕೂಡ ರದ್ದಾಗಿದೆ. ಎರಡು ವಾರಗಳ ಒಳಗಾಗಿ ಎಲ್ಲರೂ ನ್ಯಾಯಾಲಯಕ್ಕೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಇದರಿಂದ ನನಗೆ ಬಹಳ ಸಂತೋಷವಾಗಿದೆ ಎಂದು ಅವರು ತಿಳಿಸಿದರು.
ಧಾರವಾಡದಲ್ಲಿ ಇಂತಹ ರಾಜಕಾರಣಿಯನ್ನು ಹಿಂದೆಂದೂ ನೋಡಿರಲಿಲ್ಲ. ಈ ಹಿಂದೆ ಅನೇಕ ಪ್ರಭಾವಿ ನಾಯಕರು ಹಾಗೂ ಹೋರಾಟಗಾರರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ರಾಜಕೀಯ ಲಾಭಕ್ಕಾಗಿ ಕೊಲೆ ಮಾಡಿಸಿ ಕಾನೂನಿನಿಂದ ತಪ್ಪಿಸಿಕೊಳ್ಳಬಹುದು ಎಂದು ಅವರು ಭಾವಿಸಿದ್ದರು ಎಂದು ಆರೋಪಿಸಿದರು.
ಜನಪ್ರತಿನಿಧಿಗಳ ನ್ಯಾಯಾಲಯ ಹಾಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿತ್ತು. ಇದರಿಂದ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನವೂ ಉಳಿದಿತ್ತು ಎಂದು ಹೇಳಿದರು.
ಆದರೆ, ಇದೀಗ ಜಾಮೀನು ರದ್ದಾಗಿರುವುದರ ಜೊತೆಗೆ ಅವರ ಶಾಸಕ ಸ್ಥಾನವೂ ಕೈ ತಪ್ಪಿದೆ. ಈ ಹೋರಾಟದಲ್ಲಿ ಭಾಗಿಯಾದ ಎಲ್ಲರಿಗೂ ಸಂತೋಷವಾಗಿದೆ. ನ್ಯಾಯಕ್ಕಾಗಿ ನಾವು ನಿರಂತರ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಇದು ನಮ್ಮ ಅಂತಿಮ ಗೆಲುವಲ್ಲ. ಮುಂದಿನ ದಿನಗಳಲ್ಲಿ ಹೈಕೋರ್ಟ್ನಲ್ಲಿಯೂ ನಮಗೆ ಜಯ ಸಿಗಲಿದೆ ಎಂಬ ವಿಶ್ವಾಸವಿದೆ ಎಂದು ಬಸವರಾಜ ಕೊರವರ ಹೇಳಿದರು.






