ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ: ಬಿರುಸಿನಿಂದ ಸಾಗಿದ ಮತದಾನ ಪ್ರಕ್ರಿಯೆ

ಹುಬ್ಬಳ್ಳಿ : ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ. ಬೆಳಿಗ್ಗೆ 8 ಗಂಟೆಗೆ ಮತದಾರರು ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವ ದೃಶ್ಯ ಸಾಮಾನ್ಯವಾಗಿದೆ. ಅದರಲ್ಲೂ ಬಸವೇಶ್ವರ ನಗರದ ಮತಗಟ್ಟೆಯಲ್ಲಿ ಮತದಾರರು ಹೆಚ್ಚು ಉತ್ಸಾಹದಿಂದ ಸರತಿ ಸಾಲಿನಲ್ಲಿ ನಿಂತುಕೊಂಡು ಮತದಾನ ಮಾಡುತ್ತಿದ್ದಾರೆ. ಈ ಮತದಾನ ಪ್ರಕ್ರಿಯೆ ಸಂಜೆ 4ರವರೆಗೆ ನಡೆಯಲಿದೆ.
ಕ್ಷೇತ್ರ ವ್ಯಾಪ್ತಿಯು ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಟ್ಟು 137 ಮತಗಟ್ಟೆಗಳನ್ನು (128 ಮತಗಟ್ಟೆ ಮತ್ತು 9 ಸಹಾಯಕ ಮತಗಟ್ಟೆ) ಸ್ಥಾಪಿಸಲಾಗಿದೆ. ನಗರ ಪ್ರದೇಶದಲ್ಲಿ 128 ಹಾಗೂ ಗ್ರಾಮೀಣ ಪ್ರದೇಶದಲ್ಲಿ 29 ಮತಗಟ್ಟೆಗಳು ಇವೆ. ಈ ಪೈಕಿ 33 ಅತಿಸೂಕ್ಷ್ಮ, 20 ಸೂಕ್ಷ್ಮ ಮತ್ತು 45 ಸಾಮಾನ್ಯ ಎಂದು ಗುರುತಿಸಲಾಗಿದೆ.
ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 97,398 ಮತದಾರರು ಇದ್ದಾರೆ. ಮತದಾನ ಪ್ರಕ್ರಿಯೆ ನಿರ್ವಹಣೆಗೆ 822 ನೌಕರರನ್ನು ನಿಯೋಜಿಸಲಾಗಿದೆ. 196 ಸಿಬ್ಬಂದಿಯನ್ನು ಕಾಯ್ದಿರಿಸಲಾಗಿದೆ.
ಕಣಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರು ಕುಟುಂಬ ಸಮೇತ ಆಗಮಿಸಿ ಬಸವೇಶ್ವರ ನಗರದ ಸರಕಾರಿ ಶಾಲೆಯಲ್ಲಿರುವ ಮತಗಟ್ಟೆಯಲ್ಲಿ ತಮ್ಮ ಮತವನ್ನು ಚಲಾಯಿಸಿದರು.
ಇದೇ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕೇಶ್ವಾಪುರದ ಫಾತಿಮಾ ಶಾಲೆಯಲ್ಲಿ ಮತ ಚಲಾಯಿಸಿದರು.
ಕಾಂಗ್ರೆಸ್ ವಿರುದ್ಧ ಪ್ರಹ್ಲಾದ್ ಜೋಶಿ ವಾಗ್ದಾಳಿ
ಹುಬ್ಬಳ್ಳಿಯ ಫಾತಿಮಾ ಪ್ರೌಢಶಾಲೆಯಲ್ಲಿ ಪದವೀಧರರ ಚುನಾವಣೆಯಲ್ಲಿ ಮತದಾನ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ʼಕಾಂಗ್ರೆಸ್ ಸರಕಾರದ ವಿರುದ್ಧ ಜನರು ಆಕ್ರೋಶಗೊಂಡಿದ್ದು, ಪದವೀಧರ ಮತದಾರರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್ ಜನರಿಂದ ತಿರಸ್ಕೃತವಾಗಿದ್ದು, ಚುನಾವಣೆಯಲ್ಲಿ ಮುಖಭಂಗ ಅನುಭವಿಸಲಿದೆʼ ಎಂದು ಭವಿಷ್ಯ ನುಡಿದರು.






