ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಧರಣಿ

ಬೆಂಗಳೂರು: ಕಾರ್ಮಿಕರ ವೇತನವನ್ನು ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರವಿವಾರದಂದು ಇಲ್ಲಿನ ಪೀಣ್ಯ ಎರಡನೆ ಸ್ಟೇಜ್ ಬಸ್ ಸ್ಟಾಂಡ್ ಬಳಿ ಕರ್ನಾಟಕ ಜನರಲ್ ಲೆಬರ್ ಯೂನಿಯನ್ ನೇತೃತ್ವದಲ್ಲಿ ಕಾರ್ಮಿಕರು ಧರಣಿ ನಡೆಸಿದರು.
ಕಾರ್ಮಿಕ ವಿರೋಧಿಯಾಗಿರುವ 4 ಲೇಬರ್ ಕೋಡ್‍ಗಳನ್ನು ತಕ್ಷಣವೇ ವಾಪಾಸ್ ಪಡೆಯಬೇಕು. ಒವರ್ ಟೈಮ್(ಓ.ಟಿ.) ರಹಿತ 12 ಗಂಟೆಗಳ ಕೆಲಸ ಮತ್ತು ಮಹಿಳೆಯರನ್ನು ರಾತ್ರಿ ಪಾಳಿಯ ಕೆಲಸಕ್ಕೆ ಅನುವು ಮಾಡುವ ಕರ್ನಾಟಕ ಕಾರ್ಖಾನೆ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಕಾರ್ಮಿಕರು ಒತ್ತಾಯಿಸಿದರು.
ಕನಿಷ್ಠ ವೇತನವನ್ನು 35 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು. ಪ್ರತಿನಿತ್ಯ 8 ಗಂಟೆಗಳ ಕೆಲಸಕ್ಕೆ ಕನಿಷ್ಟ 1346 ರೂ. ದರವನ್ನು ನಿಗದಿ ಮಾಡಬೇಕು. ಎಲ್ಲ ಕಾರ್ಮಿಕರಿಗೆ ಬಾಕಿ ಸಂಬಳವನ್ನು ನೀಡಬೇಕು. ಹಾಗೆಯೇ ಪ್ರತಿ ತಿಂಗಳು 7ನೆ ತಾರಿಖಿನೊಳಗೆ ವೇತನವನನು ಪಾವತಿ ಮಾಡಬೇಕು. ನಿಗಧಿತ ಬೋನಸ್ ಅನ್ನು ನೀಡಬೇಕು. ಪ್ರತಿ ವರ್ಷ ಶೇ.20 ಸಂಬಳ ಹೆಚ್ಚಳ ಮಾಡಬೇಕು. ಗ್ರಾಚ್ಯುಟಿ, ಇಎಸ್‍ಐ ಮತ್ತು ಪಿಎಫ್ ಅನ್ನು ನೀಡಬೇಕು ಎಂದು ಧರಣಿನಿರತ ಕಾರ್ಮಿಕರು ಒತ್ತಾಯಿಸಿದರು.
ಕೆಲಸದ ಸಮಯದಲ್ಲಿ ಅಪಘಾತ ನಡೆದಲ್ಲಿ ಕಾರ್ಮಿಕರ ಪರಿಹಾರ ಕಾಯ್ದೆಯ ಪ್ರಕಾರ ಪರಿಹಾರ ನೀಡಬೇಕು. ಗುತ್ತಿಗೆ ಪದ್ದತಿಯನ್ನು ರದ್ದು ಮಾಡಬೇಕು. ಎಲ್ಲ ಕಾರ್ಮಿಕರನ್ನು ಖಾಯಂ ಮಾಡಬೇಕು. ವಲಸೆ ಕಾರ್ಮಿಕರಿಗೆ ಮಂಡಳಿಯನ್ನು ನಿರ್ಮಿಸಿ, ಆರ್ಥಿಕ ಮತ್ತು ಸಾಮಾಜಿಕ ಸುರಕ್ಷೆಯನ್ನು ಒದಗಿಸಬೇಕು ಎಂದು ಕಾರ್ಮಿಕರು ಆಗ್ರಹಿಸಿದರು.
ಮಹಿಳೆಯರಿಗೆ ಪುರುಷರ ಸಮಾನ ವೇತನ ನೀಡಬೇಕು. ಲೋಡಿಂಗ್ -ಆನ್ ಲೋಡಿಂಗ್ ಕೆಲಸದ ದರವನ್ನು ಕನಿಷ್ಠ ರೂ 500 ಪ್ರತಿ ಟನ್ ಗೆ ಹೆಚ್ಚಿಸಬೇಕು. ಗಾರ್ಮೆಂಟ್ ಕಾರ್ಮಿಕರ ಕನಿಷ್ಠ ವೇತನವನ್ನು ಹೆಚ್ಚಿಸಿ, ಬೇರೆ ವಲಯಗಳ ಕನಿಷ್ಠ ವೇತನದ ಸರಿಸಮಾನ ವೇತನವನ್ನೇ ನಿಗಧಿ ಮಾಡಬೇಕು ಎಂದು ಕಾರ್ಮಿಕರು ತಿಳಿಸಿದರು.







