ಭಾರತದಲ್ಲಿ ಬೊಜ್ಜಿನ ಸಮಸ್ಯೆ ಎಷ್ಟು ತೀವ್ರ ಗೊತ್ತೇ? ಇಲ್ಲಿದೆ ವಿವರ...

ಸಾಂದರ್ಭಿಕ ಚಿತ್ರ PC: istockphoto
ಹೊಸದಿಲ್ಲಿ: ಭಾರತದ ಪ್ರತಿ 10 ಕುಟುಂಬಗಳ ಪೈಕಿ ಎರಡು ಕುಟುಂಬಗಳಲ್ಲಿ ಎಲ್ಲರೂ ಅಧಿಕ ದೇಹತೂಕ ಅಥವಾ ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಆತಂಕಕಾರಿ ಅಂಶವನ್ನು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.
ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಪ್ರಕಾರ ವ್ಯಕ್ತಿಯ ಎತ್ತರಕ್ಕೆ ಅನುಸಾರವಾಗಿ ಇರಬೇಕಾದ ತೂಕಕ್ಕಿಂತ ಹೆಚ್ಚಿನ ತೂಕ ಇದ್ದಲ್ಲಿ ಅದನ್ನು ಅಧಿಕ ದೇಹತೂಕ ಎಂದು ಪರಿಗಣಿಸಲಾಗುತ್ತದೆ. ಒಬ್ಬ ವ್ಯಕ್ತಿಯ ಬಿಎಂಐ ಪ್ರತಿ ಚದರ ಮೀಟರ್ ಗೆ 25 ರಿಂದ 29.9 ಕೆಜಿ ಇದ್ದರೆ ಅದನ್ನು ಅಧಿಕ ದೇಹತೂಕ ಹಾಗೂ 30 ಕೆಜಿಗಿಂತ ಹೆಚ್ಚು ಬಿಎಂಐ ಇದ್ದರೆ ಅದನ್ನು ಬೊಜ್ಜು ಎಂದು ಪರಿಗಣಿಸಲಾಗುತ್ತದೆ.
ಐಸಿಎಂಆರ್-ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಕ್ಯಾನ್ಸರ್ ಪ್ರಿವೆನ್ಷನ್ ಅಂಡ್ ರೀಸರ್ಚ್ (ನ್ಐಸಿಪಿಆರ್), ಟೆರಿ ಸ್ಕೂಲ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಅಂಡ್ ಸಿಂಬೋಸಿಸ್ ಇಂಟರ್ನ್ಯಾಷನಲ್ ಜಂಟಿಯಾಗಿ ಐದನೇ ಸುತ್ತಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಅಂಕಿ ಅಂಶಗಳನ್ನು ವಿಶ್ಲೇಷಿಸಿ ಈ ಅಂಶವನ್ನು ಬೆಳಕಿಗೆ ತಂದಿವೆ. ಸುಮಾರು ಆರು ಲಕ್ಷ ಕುಟುಂಬಗಳ ಮಾಹಿತಿಯನ್ನು ವಿಶ್ಲೇಷಿಸಲಾಗಿದೆ. ಶೇಕಡ 20ರಷ್ಟು ಕುಟುಂಬಗಳಲ್ಲಿ ಎಲ್ಲ ವಯಸ್ಕರು ಅಧಿಕ ದೇಹತೂಕ ಹೊಂದಿದ್ದರೆ, ಶೇಕಡ 10ರಷ್ಟು ಕುಟುಂಬಗಳ ಎಲ್ಲರೂ ಬೊಜ್ಜಿನ ಸಮಸ್ಯೆ ಹೊಂದಿದ್ದಾರೆ ಎಂದು ಅಧ್ಯಯನ ವರದಿ ವಿವರಿಸಿದೆ.
ಮಣಿಪುರ, ಕೇರಳ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂಗಳ ಶೇಕಡ 30ರಷ್ಟು ಕುಟುಂಬಗಳ ಎಲ್ಲರೂ ಅಧಿಕ ದೇಹತೂಕ ಹೊಂದಿದ್ದಾರೆ. ತಮಿಳುನಾಡು ಮತ್ತು ಪಂಜಾಬ್ ನಲ್ಲಿ ಐದು ಕುಟುಂಬಗಳ ಪೈಕಿ ಎರಡು ಕುಟುಂಬಗಳನ್ನು ಬೊಜ್ಜು ಎಂದು ವರ್ಗೀಕರಿಸಲಾಗಿದೆ. ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ, ಬೊಜ್ಜಿನ ಸಮಸ್ಯೆ ಇರುವವರ ಸಂಖ್ಯೆ ನಗರ ಪ್ರದೇಶಗಳಲ್ಲಿ ಎರಡು ಪಟ್ಟು ಅಧಿಕ. ಒಂದು ಕುಟುಂಬದಲ್ಲಿ ಒಬ್ಬ ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದರೆ, ಕುಟುಂಬದ ಇತರರು ಬೊಜ್ಜಿನ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಅಧಿಕ ಎನ್ನುವುದು ಅಧ್ಯಯನದಿಂದ ದೃಢಪಟ್ಟಿದೆ ಎಂದು ಐಸಿಎಂಆರ್-ಎನ್ಐಸಿಪಿಆರ್ ಸಂಶೋಧಕ ಪ್ರಶಾಂತ್ ಕುಮಾರ್ ಸಿಂಗ್ ಹೇಳಿದ್ದಾರೆ.