ದೇಶದ ಮೊಟ್ಟಮೊದಲ ಎಐ- ಆಧರಿತ ಡಾಟಾ ಪಾರ್ಕ್ ಎಲ್ಲಿ ತಲೆ ಎತ್ತಲಿದೆ ಗೊತ್ತೇ?

PC: x.com/PTI_News
ರಾಯಪುರ: ಛತ್ತೀಸ್ ಗಢ ರಾಜ್ಯದ ಮೊಟ್ಟಮೊದಲ ಕೃತಕ ಬುದ್ಧಿಮತ್ತೆ ಆಧರಿತ ಡಾಟಾ ಸೆಂಟರ್ ಪಾರ್ಕ್ ಗೆ ಮುಖ್ಯಮಂತ್ರಿ ವಿಷ್ಣುದೇವ ಸಾಯಿ ನವರಾಯಪುರದಲ್ಲಿ ಶನಿವಾರ ಶಿಲಾನ್ಯಾಸ ಮಾಡಿದರು.
ಸುಮಾರು 13.5 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಪಾರ್ಕ್ ನ 2.7 ಹೆಕ್ಟೇರ್ ವಿಶೇಷ ವಿತ್ತ ವಲಯ (ಎಸ್ಇಝೆಡ್)ವನ್ನು ಎಐ ಆಧರಿತ ಸೇವೆಗಳಿಗಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ದೇಶದಲ್ಲೇ ಮೊಟ್ಟಮೊದಲ ವಿನೂತನ ಪ್ರಯತ್ನವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಸುಮಾರು 1000 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಈ ಪಾರ್ಕ್ ನಿರ್ಮಾಣವಾಗುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.
"ಇದು ಕೇವಲ ಡಾಟಾ ಸೆಂಟರ್ ಮಾತ್ರ ಆಗಿರುವುದಿಲ್ಲ; ಪ್ರಗತಿ ಮತ್ತು ಸಬಲೀಕರಣದ ಡಿಜಿಟಲ್ ಬೆನ್ನೆಲುಬು ಆಗಿರುತ್ತದೆ" ಎಂದು ಸಿಎಂ ಸಾಯಿ ಹೇಳಿದ್ದಾರೆ. ಇದು ರಾಜ್ಯದ ಯುವಕರು, ಕೃಷಿಕರು ಮತ್ತು ಆದಿವಾಸಿ ಸಮುದಾಯಗಳ ಬಾಳನ್ನು ಪರಿವರ್ತಿಸಬಲ್ಲ ಯೋಜನೆಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ. ಡಿಜಿಟಲ್ ಇಂಡಿಯಾದ ಹೃದಯ ಬಡಿತವಾಗಲು ಛತ್ತೀಸ್ ಗಢ ಸಜ್ಜಾಗಿದೆ ಎಂದು ಅವರು ಹೇಳಿದ್ದಾರೆ.





