ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ವೇಳೆ ಸೈಬರ್ ಕಳ್ಳರ ಗಾಳಕ್ಕೆ ಸಿಲುಕಬೇಡಿ: ಸಿಐಡಿ ಡಿಜಿಪಿ ಡಾ.ಎಂ.ಎ.ಸಲೀಂ
''ಸಾಲ ನೀಡುವ ಆ್ಯಪ್ಗಳ ಆಮಿಷಕ್ಕೆ ಬಲಿಯಾಗದಿರಿ''

ಡಾ.ಎಂ.ಎ.ಸಲೀಂ- ಸಿಐಡಿ ಡಿಜಿಪಿ
ಬೆಂಗಳೂರು, ಜು.15: ‘ರಾಜ್ಯ ಸರಕಾರದ ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳ ಹೆಸರಿನಲ್ಲಿ ನಕಲಿ ಆ್ಯಪ್ ಸೃಷ್ಠಿಸಿರುವ ಸೈಬರ್ ಕಳ್ಳರು, ಸಾರ್ವಜನಿಕರ ವೈಯಕ್ತಿಕ ಮಾಹಿತಿ ಕಲೆ ಹಾಕಿ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಜನ ಸಾಮಾನ್ಯರು ಈ ಬಗ್ಗೆ ಎಚ್ಚರಿಕೆ ವಹಿಸಸಬೇಕೆಂದು ಸಿಐಡಿ ಡಿಜಿಪಿ ಡಾ.ಎಂ.ಎ.ಸಲೀಂ ತಿಳಿಸಿದ್ದಾರೆ.
ಶನಿವಾರ ನಗರದ ಎಫ್ಕೆಸಿಸಿಐ ಕಚೇರಿಯ ಸಭಾಂಗಣದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ ವತಿಯಿಂದ ನಡೆದ ‘ಸೈಬರ್ ಭದ್ರತೆ-ಕೃತಕ ಬುದ್ದಿಮತ್ತೆಯ ಸಂಭಾವ್ಯತೆ’ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರಕಾರದ ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಯ ಫಲಾನುಭವ ಪಡೆಯಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ವೇಳೆ ಸೈಬರ್ ಕಳ್ಳರ ಗಾಳಕ್ಕೆ ಸಿಲುಕಬೇಡಿ. ನಕಲಿ ಆ್ಯಪ್ಗಳ ಮೂಲಕ ಮಾಹಿತಿ ಕಲೆ ಹಾಕುತ್ತಿರುವ ಅಂಶ ಬೆಳಕಿಗೆ ಬಂದಿದೆ ಎಂದರು.
ರಾಜ್ಯದಲ್ಲಿ 45 ಬಗೆಯ ವಿವಿಧ ಸೈಬರ್ ಅಪರಾಧಗಳು ಪತ್ತೆಯಾಗಿವೆ. ಪೊಲೀಸ್ ಠಾಣೆಗಳಲ್ಲಿ ದಾಖಲಾಗುತ್ತಿರುವ ಪ್ರಕರಣಗಳ ಪೈಕಿ ಶೇ.20ರಷ್ಟು ಸೈಬರ್ ಅಪರಾಧಗಳಿವೆ. ಆಧುನಿಕ ತಂತ್ರಜ್ಞಾನದ ವ್ಯವಸ್ಥೆ ಹೊಂದಿರುವ ಲ್ಯಾಬ್ಗಳು ಮತ್ತು ನುರಿತ ಸೈಬರ್ ತಜ್ಞ ಪೊಲೀಸ್ ಅಧಿಕಾರಿಗಳ ಶ್ರಮದಿಂದ ಶೇ.17ರಷ್ಟು ಈ ಮಾದರಿಯ ಅಪರಾಧಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಈ ಸೈಬರ್ ಅಪರಾಧಗಳಲ್ಲಿ ಕಾಲೇಜು ವ್ಯಾಸಂಗ ಅರ್ಧಕ್ಕೆ ಮೊಟಕುಗೊಳಿಸಿದವರು, ನಿರುದ್ಯೋಗಿಗಳೇ ತೊಡಗಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಉತ್ತರ ಭಾರತದ ಗ್ರಾಮೀಣ ಭಾಗದಲ್ಲಿ ಅಥವಾ ವಿದೇಶದ ಮೂಲೆಯಲ್ಲಿ ಕುಳಿತುಕೊಂಡು ಕೃತ್ಯ ಎಸಗುತ್ತಿದ್ದಾರೆ. ಹೀಗಾಗಿ ಇವರನ್ನು ಪತ್ತೆ ಹಚ್ಚುವುದೂ ಸವಾಲಿನ ಕೆಲಸವಾಗಿದೆ. ಸೈಬರ್ ಅಪರಾಧ ಪ್ರಕರಣಗಳಿಗೆ ಹೋಲಿಸಿದರೆ ದರೋಡೆ, ಕೊಲೆ, ಸುಲಿಗೆಯಂತಹ ಪ್ರಕರಣಗಳು ಶೇ.5ರಷ್ಟಿವೆ ಎಂದು ಡಾ.ಎಂ.ಎ. ಸಲೀಂ ತಿಳಿಸಿದರು.
ಆಧುನಿಕ ಯುಗದಲ್ಲಿ ಡಿಜಿಟಲೈಸೇಷನ್ ವ್ಯವಸ್ಥೆಯಿಂದ ಬದುಕು ಬಹಳ ಸುಲಭವಾಗಿದೆ. ಆದರೆ, ಇದನ್ನೇ ದುರ್ಬಳಕೆ ಮಾಡುತ್ತಿರುವ ಸೈಬರ್ ಕಳ್ಳರು ಮುಗ್ದ ಜನರಿಂದ ಹಣ ಪೀಕಿಸಲು ದಿನಕ್ಕೊಂದು ಹೊಸ ಮಾರ್ಗ ಕಂಡುಕೊಳ್ಳುತ್ತಿದ್ದಾರೆ. ಆನ್ಲೈನ್ ವ್ಯವಹಾರ ನಡೆಸುವ ವೇಳೆ ಸೈಬರ್ ವಂಚನೆಗೆ ಸಿಲುಕದಂತೆ ಬಹಳ ಎಚ್ಚರಿಕೆ ವಹಿಸಬೇಕು ಎಂದು ಡಾ.ಎಂ.ಎ. ಸಲೀಂ ಸಲಹೆ ನೀಡಿದರು.
ಸಾಲ ನೀಡುವ ಬಹುತೇಕ ಆ್ಯಪ್ಗಳು ಚೀನಾ ಮೂಲದ್ದಾಗಿದ್ದು, ಚೀನಾದಿಂದಲೇ ಇವುಗಳನ್ನು ನಿಯಂತ್ರಿಸಲಾಗುತ್ತದೆ. ಸಾಲ ನೀಡುವ ಆ್ಯಪ್ಗಳ ಆಮಿಷಕ್ಕೆ ಬಲಿಯಾಗದಿರಿ. ಕೆಲ ಸಂಸ್ಥೆಗಳು ನಕಲಿ ಜಾಹೀರಾತಿನ ಮೂಲಕ ನೌಕರಿ ಕೊಡುವ ಹೆಸರಿನಲ್ಲಿ ನಿರುದ್ಯೋಗಿಗಳಿಗೆ ಟೋಪಿ ಹಾಕುತ್ತಿರುವ ಪ್ರಕರಣಗಳೂ ಹೆಚ್ಚುತ್ತಿವೆ ಎಂದು ಡಾ.ಎಂ.ಎ. ಸಲೀಂ ಹೇಳಿದರು.
ಸಂಸ್ಥೆಗಳು ತಮ್ಮ ವೆಬ್ಸೈಟ್ಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ಸೈಬರ್ ಭದ್ರತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಪ್ರತಿಷ್ಠಿತ ಕಂಪನಿಯೊಂದರ ಇಮೇಲ್ ದುರ್ಬಳಕೆ ಮಾಡಿ ಅವರ ಆಪ್ತರಿಂದ ಕೆಲ ವೈಯಕ್ತಿಕ ಮಾಹಿತಿ ಕಲೆ ಹಾಕಿರುವ ಪ್ರಕರಣವೊಂದು ಕೆಲ ದಿನಗಳ ಹಿಂದೆ ದಾಖಲಾಗಿದೆ. ಈ ಹಿಂದೆ ಆದಾಯ ತೆರಿಗೆ ಇಲಾಖೆಗೆ ಸಂಬಂಧಿಸಿದ ವೆಬ್ಸೈಟ್ವೊಂದನ್ನೇ ಹ್ಯಾಕ್ ಮಾಡಿ ಕೋಟ್ಯಂತರ ರೂ. ಲಪಟಾಯಿಸಿ ಸಿಕ್ಕಿಬಿದ್ದಿದ್ದರು ಎಂದು ಡಾ.ಎಂ.ಎ.ಸಲೀಂ ತಿಳಿಸಿದರು.
ಎಫ್ಕೆಸಿಸಿಐ ಅಧ್ಯಕ್ಷ ಬಿ.ವಿ.ಗೋಪಾಲ ರೆಡ್ಡಿ ಮಾತನಾಡಿ, ಉದ್ಯಮ, ಕೈಗಾರಿಕೆ ವಿಚಾರದಲ್ಲೂ ಸೈಬರ್ ಭದ್ರತೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಮುಂದುವರಿದ ತಂತ್ರಜ್ಞಾನಗಳಲ್ಲಿ ಕೃತಕ ಬುದ್ದಿಮತ್ತೆ (ಎಐ) ಬಳಕೆ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಸೈಬರ್ ಭದ್ರತೆಗೂ ಇವುಗಳ ಉಪಯೋಗವಾದರೆ ಉತ್ತಮ ಎಂದರು.
ಕಾರ್ಯಕ್ರಮದಲ್ಲಿ ಡಾಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾದ ನಿರ್ದೇಶಕ ಕೆ.ವೆಂಕಟೇಶ್ ಮೂರ್ತಿ, ಎಫ್ಕೆಸಿಸಿಐ ಐಟಿ-ಬಿಟಿ ಸಮಿತಿಯ ಅಧ್ಯಕ್ಷೆ ರೂಪಾ ರಾಣಿ, ಯುಎಸ್ಎ ಎಐ ಹಾಗೂ ಸೈಬರ್ ಸೆಕ್ಯೂರಿಟಿ ಎಂಜಿಐನ ನಿರ್ದೇಶಕ ಡಾ.ಉದಯ್ ಶಂಕರ್ ಪುರಾಣಿಕ್ ಸೇರಿ ಹಲವರು ಉಪಸ್ಥಿತರಿದ್ದರು.







