ಲಂಚ ಹಗರಣಕ್ಕೆ ನಾಟಕೀಯ ತಿರುವು: ಈಡಿ ಅಧಿಕಾರಿಯೇ ಆರೋಪಿ!

ತಿರುವನಂತಪುರಂ: ಕಾನೂನು ಜಾರಿ ನಿರ್ದೇಶನಾಲಯದ ಕುಣಿಕೆಯಿಂದ ತಪ್ಪಿಸಲು ಎರಡು ಕೋಟಿ ರೂಪಾಯಿ ಲಂಚ ಪಡೆಯಲು ಯತ್ನಿಸಿದ ಆರೋಪದಲ್ಲಿ ಮೂವರು ಆರೋಪಿಗಳನ್ನು ವಿಚಕ್ಷಣಾ ಮತ್ತು ಭ್ರಷ್ಟಾಚಾರ ವಿರೋಧಿ ಬ್ಯೂರೊ (ವಿಎಸಿಬಿ) ಬಂಧಿಸಿದ್ದ ಪ್ರಕರಣ ಇದೀಗ ವಿಚಿತ್ರ ತಿರುವು ಪಡೆದುಕೊಂಡಿದ್ದು, ಇ.ಡಿ ಕೊಚ್ಚಿ ಘಟಕದ ಅಧಿಕಾರಿಯೊಬ್ಬರನ್ನು ಪ್ರಕರಣ ಪ್ರಮುಖ ಆರೋಪಿಯಾಗಿ ವಿಎಸಿಬಿ ವಿಚಾರಣೆಗೆ ಗುರಿಪಡಿಸಿದೆ.
ನಿರ್ದೇಶನಾಲಯದ ಕೊಚ್ಚಿ ಘಟಕದ ಸಹಾಯಕ ನಿರ್ದೇಶಕ ಶೇಖರ್ ಕುಮಾರ್ ಅವರನ್ನು ಮೂವಾಟ್ಟುಪ್ಪುಝ ವಿಚಕ್ಷಣಾ ವಿಶೇಷ ನ್ಯಾಯಾಲಯದಲ್ಲಿ ವಿಎಸಿಬಿ ಸಲ್ಲಿಸಿದ ರಿಮಾಂಡ್ ವರದಿಯಲ್ಲಿ ಪ್ರಮುಖ ಆರೋಪಿಯಾಗಿ ಹೆಸರಿಸಲಾಗಿದೆ. ಎರಡನೇ ಮತ್ತು ಮೂರನೇ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಈ ವರದಿ ಸಲ್ಲಿಕೆಯಾಗಿದೆ. ತಮ್ಮನಂನ ವಿಲ್ಸನ್ ವರ್ಗೀಸ್ (36) ಮತ್ತು ರಾಜಸ್ಥಾನದ ಮುಖೇಶ್ ಕುಮಾರ್ (55) ಅವರನ್ನು ವಿಎಸಿಬಿ ಶುಕ್ರವಾರ ಬಂಧಿಸಿತ್ತು. ಕೊಚ್ಚಿ ಮೂಲದ ಲೆಕ್ಕ ಪರಿಶೋಧಕ ರಂಜಿತ್ ವಾರಿಯರ್ ಎಂಬಾತನನ್ನೂ ವಿಎಸಿಬಿ ಶನಿವಾರ ಬಂಧಿಸಿತ್ತು. ಉದ್ಯಮಿಯ ವಿವರಗಳನ್ನು ವಿಲ್ಸನ್ ಜತೆ ಈತ ಹಂಚಿಕೊಂಡಿದ್ದ ಎನ್ನಲಾಗಿದೆ.
ಉದ್ಯಮಿ ಹೇಳಿಕೆಯ ಆಧಾರದಲ್ಲಿ ಇ.ಡಿ. ಅಧಿಕಾರಿಯನ್ನು ಆರೋಪಿಯಾಗಿ ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ಎರ್ನಾಕುಲಂ ವಿಎಸಿಬಿ ಅಧೀಕ್ಷಕ ಎಸ್.ಶಶಿಧರನ್ ಹೇಳಿದ್ದಾರೆ. ಆದರೆ ಅಧಿಕಾರಿಯ ಪಾತ್ರವನ್ನು ಇನ್ನಷ್ಟೇ ದೃಢಪಡಿಸಬೇಕಿದ್ದು, ಅವರನ್ನು ಇನ್ನೂ ಏಕೆ ಬಂಧಿಸಿಲ್ಲ ಎನ್ನುವುದು ಸ್ಪಷ್ಟವಾಗಿಲ್ಲ.
ಗೋಡಂಬಿ ರಫ್ತು- ಆಮದು ಕಂಪನಿಯನ್ನು ನಡೆಸುತ್ತಿದ್ದ ಕೊಲ್ಲಂ ಉದ್ಯಮಿಯೊಬ್ಬರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿತ್ತು. ರಿಮಾಂಡ್ ವರದಿಯ ಪ್ರಕಾರ, ಈ ಉದ್ಯಮಿಯ ವಹಿವಾಟು ಅತ್ಯಧಿಕವಾಗಿದ್ದು, ಹಣ ದುರ್ಬಳಕೆಯನ್ನು ಮುಚ್ಚಿ ಹಾಕುವ ಸಲುವಾಗಿ ದಾಖಲೆಗಳನ್ನು ತಿರುಚಲಾಗಿದೆ ಎಂಬ ಆರೋಪದಲ್ಲಿ ಉದ್ಯಮಿಯನ್ನು 2024ರಲ್ಲಿ ವಿಚಾರಣೆಗೆ ಹಾಜರಾಗುವಂತೆ ಕೊಚ್ಚಿ ಘಟಕದಿಂದ ಸಮನ್ಸ್ ನೀಡಲಾಗಿತ್ತು.







