ಕುಡಿಯುವ ನೀರಿನ ಸಮಸ್ಯೆ: ಬಾಳೆಪುಣಿ ಗ್ರಾಪಂ ಎದುರು ಗ್ರಾಮಸ್ಥರ ಧರಣಿ

ದೇರಳಕಟ್ಟೆ, ಫೆ.16: ಬಾಳೆಪುಣಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಉಳ್ಳಾಲ ತಾಲೂಕು ಡಿವೈಎಫ್ ಐ ನೇತೃತ್ವದಲ್ಲಿ ಗ್ರಾಮದ ಮಹಿಳೆಯರು ಬಾಳೆ ಪುಣಿ ಪಂಚಾಯತ್ ಕಚೇರಿ ಎದುರು ಖಾಲಿ ಕೊಡಗಳನ್ನಿಟ್ಟು ಧರಣಿ ನಡೆಸಿದರು.
ಈ ಸಂದರ್ಭ ಮಾತನಾಡಿದ ಉಳ್ಳಾಲ ತಾಲೂಕು ಡಿವೈಎಫ್ಐ ಅಧ್ಯಕ್ಷ ರಝಾಕ್ ಮೊಂಟೆಪದವು, ಕುಕ್ಕುದಕಟ್ಟೆ ಸಹಿತ ಬಾಳೆಪುಣಿ ಗ್ರಾಮ ವ್ಯಾಪ್ತಿಯ ಕೆಲವು ಪ್ರದೇಶದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ಪಂಚಾಯತ್ ವಾರಕ್ಕೆ ಎರಡು ಬಾರಿ ನೀರು ಪೊರೈಸುತ್ತಿದೆ. ಇದು ಸಾಕಾಗುವುದಿಲ್ಲ. ಈ ಸಮಸ್ಯೆ ಪರಿಹರಿಸುವಂತೆ ಪಂಚಾಯತ್ ಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಧರಣಿನಿತರೊಂದಿಗೆ ಮಾತುಕತೆ ನಡೆಸಿದ ಪಿಡಿಒ ವೆಂಕಟೇಶ್, ನೀರಿನ ಸಮಸ್ಯೆ ಎದುರಾಗಿರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಡಿವೈಎಫ್ ಐ ಉಪಾಧ್ಯಕ್ಷ ರಝಾಕ್ ಮುಡಿಪು, ಮುಡಿಪು ಘಟಕ ಕಾರ್ಯದರ್ಶಿ ನಿಝಾರ್ ಮುಡಿಪು, ಉಪಾಧ್ಯಕ್ಷೆ ತೌಸೀನ ಬಾನು, ಹುಸೈನ್ ಮೊಂಟೆಪದವು, ಮಾದೇವಿ, ತುಳಸಿ ಹಾಗೂ ಗ್ರಾಮಸ್ಥರು ಧರಣಿಯಲ್ಲಿ ಭಾಗವಹಿಸಿದ್ದರು
ಬಾಳೆ ಪುಣಿ ಗ್ರಾಮ ಪಂಚಾಯತಗ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇರಲಿಲ್ಲ. ಮೊನ್ನೆ ನೀರು ಬಿಡುವ ವ್ಯಕ್ತಿ ಅನಾರೋಗ್ಯ ನಿಮಿತ್ತ ಎರಡು ದಿನ ರಜೆ ಮಾಡಿದ್ದರು. ಈ ವಿಚಾರ ನನಗೆ ತಿಳಿಸದ ಕಾರಣ ನೀರು ಸರಬರಾಜು ಸ್ಥಗಿತಗೊಂಡಿತ್ತು. ಮುಂದೆ ಈ ರೀತಿ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಇರುವ ಕಡೆಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದು.
-ವೆಂಕಟೇಶ್, ಪಿಡಿಒ, ಬಾಳೆ ಪುಣಿ ಗ್ರಾಪಂ









