ಎಡ್ಜ್ಬಾಸ್ಟನ್ ಟೆಸ್ಟ್: ಭಾರತಕ್ಕೆ ಮೊದಲ ದಿನದ ಗೌರವ

PC: x.com/AJEnglish
ಬರ್ಮಿಂಗ್ಹ್ಯಾಂ: ಅತಿಥೇಯ ಇಂಗ್ಲೆಂಡ್ ವಿರುದ್ಧದ ಸರಣಿಯ ಎರಡನೇ ಪಂದ್ಯದ ಮೊದಲ ದಿನ ಭಾರತದ ಬ್ಯಾಟ್ಸ್ಮನ್ಗಳು ಸ್ಥಿರ ಪ್ರದರ್ಶನ ತೋರಿ ಮೊದಲ ದಿನದ ಗೌರವ ಸಂಪಾದಿಸಿದರು. ದಿನದ ಆಟ ಮುಕ್ತಾಯದ ವೇಳೆಗೆ ಭಾರತ 5 ವಿಕೆಟ್ ನಷ್ಟಕ್ಕೆ 310 ರನ್ ಗಳಿಸಿತ್ತು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ 15 ರನ್ಗಳಾಗುವಷ್ಟರಲ್ಲಿ ಕೆ.ಎಲ್.ರಾಹುಲ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ತಂಡದ ಮೊತ್ತ 95 ರನ್ಗಳಾಗಿದ್ದಾಗ ಕರುಣ್ ನಾಯರ್ (31) ಅವರು ಬ್ರಿಂಡನ್ ಕಾರ್ಸ್ ಅವರಿಗೆ ವಿಕೆಟ್ ಒಪ್ಪಿಸಿದರು. ತಂಡವನ್ನು ಸುಸ್ಥಿತಿಗೆ ಒಯ್ಯುವಲ್ಲಿ ಯಶಸ್ವಿ ಜೈಸ್ವಾಲ್ (87) ಗಣನೀಯ ಕೊಡುಗೆ ನೀಡಿದರು. ರಿಷಭ್ ಪಂತ್ (25) ಮತ್ತು ನಿತೀಶ್ ಕುಮಾರ್ ರೆಡ್ಡಿ (1) ಅವರನ್ನು ಕಳೆದುಕೊಂಡಾಗ ಭಾರತದ ಮೊತ್ತ 5 ವಿಕೆಟ್ ನಷ್ಟಕ್ಕೆ 211 ರನ್ ಆಗಿತ್ತು.
ಮುರಿಯದ ಆರನೇ ವಿಕೆಟ್ಗೆ ನಾಯಕ ಶುಭ್ಮನ್ ಗಿಲ್ (ಅಜೇಯ 114) ಮತ್ತು ರವೀಂದ್ರ ಜಡೇಜಾ (ನಾಟೌಟ್ 41) 99 ರನ್ ಗಳಿಸಿ ಭಾರತದ ಮೇಲುಗೈಗೆ ಕಾರಣರಾದರು. ತೀವ್ರ ಒತ್ತಡದ ಸಂದರ್ಭದಲ್ಲೂ ಅದ್ಭುತ ಪ್ರದರ್ಶನ ನೀಡಿದ ಗಿಲ್, 216 ಎಸೆತಗಳಲ್ಲಿ 114 ರನ್ ಸಿಡಿಸಿದ್ದಾರೆ.
ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ (2/59) ಯಶಸ್ವಿ ಬೌಲರ್ ಎನಿಸಿದರೆ, ಬ್ರಿಂಡನ್ ಕಾರ್ಸ್ , ಬೆನ್ ಸ್ಟೋಕ್ಸ್ ಮತ್ತು ಶೋಯಬ್ ಬಶೀರ್ ತಲಾ ಒಂದು ವಿಕೆಟ್ ಪಡೆದರು.
ಭಾರತ ತಂಡ ಎರಡನೇ ಟೆಸ್ಟ್ ನಲ್ಲಿ ಮೂರು ಬದಲಾವಣೆಗಳನ್ನು ಮಾಡಿದ್ದು, ಶಾರ್ದೂಲ್ ಠಾಕೂರ್, ಸಾಯಿ ಸುದರ್ಶನ್ ಮತ್ತು ಜಸ್ಪ್ರೀತ್ ಬೂಮ್ರಾ ಸ್ಥಾನದಲ್ಲಿ ನಿತೀಶ್ ಕುಮಾರ್, ವಾಷಿಂಗ್ಟನ್ ಸುಂದರ್ ಮತ್ತು ಆಕಾಶ್ದೀಪ್ ಅವರನ್ನು ಆಡಿಸಿದೆ.







