ಮೂಕ ವ್ಯವಸ್ಥೆಯ ಬರ್ಬರತೆಗೆ ಬಲಿಯಾದ ಮೂಕ ಹಕ್ಕಿ

PC: istockphoto
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಎರಡು ಕೊಲೆಗಳು ರಾಜ್ಯಾದ್ಯಂತ ತೀವ್ರ ಚರ್ಚೆಯಲ್ಲಿವೆ. ಒಂದು, ಬೆಂಗಳೂರು ಸಮೀಪದ ಬಿಡದಿ ಹೋಬಳಿಯಲ್ಲಿ ಹಕ್ಕಿ ಪಿಕ್ಕಿ ಸಮುದಾಯಕ್ಕೆ ಸೇರಿದ ಮೂಕ ಬಾಲಕಿಯೊಬ್ಬಳ ಬರ್ಬರ ಹತ್ಯೆ. ಇನ್ನೊಂದು, ಹುಬ್ಬಳ್ಳಿಯಲ್ಲಿ 12 ವರ್ಷದ ಬಾಲಕನೊಬ್ಬ 14 ವರ್ಷದ ಬಾಲಕನನ್ನು ಬರ್ಬರವಾಗಿ ಇರಿದು ಕೊಂದಿದ್ದಾನೆ. ಎಲ್ಲೋ ಪಾಶ್ಚಾತ್ಯ ದೇಶಗಳಲ್ಲಿ ವಿದ್ಯಾರ್ಥಿಗಳು ಶಾಲೆ ಕಾಲೇಜುಗಳಿಗೆ ಪಿಸ್ತೂಲ್ ತಂದು ಸಹ ವಿದ್ಯಾರ್ಥಿಗಳಿಗೆ ಗುಂಡಿಕ್ಕಿರುವುದನ್ನು ಕೇಳಿದ್ದೇವೆ. ಆದರೆ ಭಾರತದಲ್ಲಿ ಅದೂ ಕರ್ನಾಟಕದ ಗ್ರಾಮೀಣ ಪ್ರದೇಶವೊಂದರ ಶಾಲೆಯಲ್ಲಿ ಎಳೆಯ ವಿದ್ಯಾರ್ಥಿಯೊಬ್ಬ ಸಹವಿದ್ಯಾರ್ಥಿಯೊಬ್ಬನನ್ನು ಚೂರಿಯಿಂದ ಇರಿದು ಕೊಲ್ಲುವುದು ನಮಗೆ ಹೊಸತು. ಇಲ್ಲಿ ಕೊಲೆಗೈಯಲ್ಪಟ್ಟ ವಿದ್ಯಾರ್ಥಿ ಮಾತ್ರವಲ್ಲ ಕೊಂದ ವಿದ್ಯಾರ್ಥಿಯೂ ಸಂತ್ರಸ್ತನೇ ಆಗಿದ್ದಾನೆ. ಇಬ್ಬರೂ ತಮ್ಮ ಭವಿಷ್ಯವನ್ನು ಕಳೆದುಕೊಂಡಿದ್ದಾರೆ. ಆದರೆ ಈ ದುರಂತಕ್ಕೆ ಯಾರನ್ನು ಹೊಣೆ ಮಾಡಬೇಕು ಎನ್ನುವುದು ತಿಳಿಯದೆ ವ್ಯವಸ್ಥೆ ಕಂಗಾಲಾಗಿದೆ.
ಬಿಡದಿಯಲ್ಲಿ ಕೊಲೆಯಾದ ಬಾಲಕಿಯ ಕುಟುಂಬದ ಕತೆಯೇ ಹೃದಯವಿದ್ರಾವಕವಾದುದು. ಬಾಲಕಿಯ ತಾಯಿ ಪ್ಲಾಸ್ಟಿಕ್ ಹೂಗಳ ಮಾಲೆಗಳನ್ನು ಮಾರುತ್ತಾ, ಕ್ಲೀನಿಂಗ್ ಕೆಲಸಗಳ ಮೂಲಕ ಬದುಕು ಮುನ್ನಡೆಸುತ್ತಿದ್ದಾಕೆ. ಕೆಲವೊಮ್ಮೆ ಗಾರೆ ಕೆಲಸಕ್ಕೂ ಹೋಗುತ್ತಾಳೆ. ಆಕೆಯ ಕುಟುಂಬದಲ್ಲಿ ಐದು ಜನರು ಮಕ್ಕಳು. ಅವರಲ್ಲಿ ಮೂವರು ಹುಟ್ಟು ಮೂಗರು. ಕುರುಡ ಗಂಡ ತೀರಿ ಹೋಗಿದ್ದು, ಇದೀಗ ಮತ್ತೆ ಮದುವೆಯಾಗಿದ್ದಾಳೆ. ಈಗ ಇರುವ ಗಂಡನೂ ಕೂಲಿ ಕೆಲಸ ಮಾಡುತ್ತಾ ಕುಟುಂಬಕ್ಕೆ ಸಹಾಯವಾಗುತ್ತಿದ್ದಾನೆ. ಕೊಲೆಯಾದ ಬಾಲಕಿ ಕೂಡ ಹುಟ್ಟು ಮೂಗಿ. ಎಂಟನೇ ತರಗತಿಯಲ್ಲಿ ಕಲಿಯುವ ಮಗಳು ಅಂದು ಸೀಮಂತ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದಳು. ಸಂಜೆ ಹೊರ ಹೋದವಳು ನಾಪತ್ತೆಯಾಗಿದ್ದಾಳೆ. ರವಿವಾರ ತಡರಾತ್ರಿಯಾದರೂ ಬರದೇ ಇದ್ದಾಗ ರಾತ್ರಿ ಒಂದು ಗಂಟೆಗೆ ಬಿಡದಿ ಪೊಲೀಸ್ ಠಾಣೆಯಲ್ಲಿ ತಾಯಿ ದೂರು ನೀಡಿದ್ದಾಳೆ. ಪೊಲೀಸರು ಆಕೆಯ ದೂರನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಮಂಗಳವಾರದಂದು ಬಾಲಕಿಯ ಮೃತದೇಹ ರೈಲ್ವೇ ಹಳಿ ಪಕ್ಕ ಅರೆನಗ್ನಾವಸ್ಥೆಯಲ್ಲಿ ಪತ್ತೆಯಾಗಿದ್ದು, ಆಕೆಯ ಮೇಲೆ ಅತ್ಯಾಚಾರವಾಗಿದೆ ಎಂದೂ ಕುಟುಂಬ ಆರೋಪಿಸುತ್ತಿದೆ. ಬಾಲಕಿಯನ್ನು ಅತ್ಯಂತ ಬರ್ಬರವಾಗಿ ಹಿಂಸೆ ನೀಡಿ ಕೊಂದು ಹಾಕಲಾಗಿದೆ. ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆಯೇ ಎನ್ನುವುದನ್ನು ಪೊಲೀಸರು ಇನ್ನೂ ಸ್ಪಷ್ಟಪಡಿಸಿಲ್ಲ. ಒಂದು ಎಳೆ ಬಾಲಕಿಯನ್ನ್ನು ಇಷ್ಟೊಂದು ಭೀಕರವಾಗಿ ಕೊಂದು ಹಾಕಿದ ಅಮಾನವೀಯ ರಾಕ್ಷಸರ ವಿರುದ್ಧ ಪೊಲೀಸ್ ತನಿಖೆ ಅತ್ಯಂತ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಹಕ್ಕಿ ಪಿಕ್ಕಿ ಕುಟುಂಬದ ಪರವಾಗಿ ವಿವಿಧ ಸಂಘಟನೆಗಳು ಜೊತೆ ಸೇರಿದ ಬಳಿಕ ಸರಕಾರ ಎಚ್ಚೆತ್ತುಕೊಂಡು, ಸಂತ್ರಸ್ತ ಕುಟುಂಬಕ್ಕೆ ಪರಿಹಾರವನ್ನು ಘೋಷಿಸಿತು. ಆದರೆ ಎಂಟನೇ ತರಗತಿಯಲ್ಲಿ ಕಲಿಯುವ, ಬಡಕುಟುಂಬದ ಮೂಗಿ ಬಾಲಕಿಯ ಮೇಲೆ ನಡೆದ ಅನ್ಯಾಯವನ್ನು ಬರೇ ದುಡ್ಡಿನಿಂದ ಸರಿದೂಗಿಸಲು ಸಾಧ್ಯವೆ? ದೂರು ನೀಡಿದ ತಕ್ಷಣವೇ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಿದ್ದರೆ ಆರೋಪಿಗಳನ್ನು ಬಂಧಿಸುವುದು ಕಷ್ಟವಿರುತ್ತಿರಲಿಲ್ಲ ಎನ್ನುವುದು ಸ್ಥಳೀಯರ ವಾದವಾಗಿದೆ.
ಸಾಧಾರಣವಾಗಿ ಕೊಳೆಗೇರಿಗಳಲ್ಲಿ, ಜೋಪಡಾಪಟ್ಟಿಗಳಲ್ಲಿ, ಅಲೆಮಾರಿ ಕುಟುಂಬಗಳಲ್ಲಿ ಎಳೆ ಮಕ್ಕಳ ಬದುಕು ಅತ್ಯಂತ ಅಪಾಯದಲ್ಲಿದೆ. ಇಂತಹ ಮಕ್ಕಳ ಮೇಲೆ ಅತಿ ಹೆಚ್ಚು ದೌರ್ಜನ್ಯಗಳು ನಡೆಯುತ್ತವೆ ಎನ್ನುವುದನ್ನು ಈಗಾಗಲೇ ಸಮೀಕ್ಷೆಗಳು ಬಹಿರಂಗಪಡಿಸಿವೆ. ಮುಖ್ಯವಾಗಿ ಇವರು ಬಡರಾಗಿರುವುದರಿಂದ ಸರಕಾರದಿಂದಲೂ ಸೂಕ್ತ ಭದ್ರತೆಯನ್ನು ನಿರೀಕ್ಷಿಸುವಂತಿಲ್ಲ. ರಾತ್ರಿ ಶೌಚದಂತಹ ಅಗತ್ಯಗಳಿಗೆ ಮನೆಯಿಂದ ಹೊರಗೆ ಹೋಗುವುದು ಇವರಿಗೆ ಅನಿವಾರ್ಯ. ಇಂತಹ ಸಂದರ್ಭಗಳಲ್ಲೇ ದುಷ್ಕರ್ಮಿಗಳು ಮಕ್ಕಳ ಮೇಲೆ ದಾಳಿ ನಡೆಸುತ್ತಾರೆ. ಪೊಲೀಸರು ಇಲ್ಲಿ ನಡೆಯುವ ಅಪರಾಧಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎನ್ನುವ ಧೈರ್ಯ ದುಷ್ಕರ್ಮಿಗಳಿಗೂ ಇದೆ. ಈ ಗುಡಿಸಲುಗಳ ಹೆಣ್ಣು ಮಕ್ಕಳು ದಿನನಿತ್ಯ ಅನುಭವಿಸುವ ಸಣ್ಣ ಪುಟ್ಟ ಲೈಂಗಿಕ ದೌರ್ಜನ್ಯಗಳು ಸುದ್ದಿಯಾಗುವುದೇ ಇಲ್ಲ. ಬೇರೆ ಬೇರೆ ರೀತಿಯ ಮಾನಸಿಕ, ದೈಹಿಕ ಹಿಂಸೆಗಳನ್ನು ಅನುಭವಿಸುತ್ತಲೇ ಇಲ್ಲಿ ಮಕ್ಕಳು ಬೆಳೆಯಬೇಕಾಗುತ್ತದೆ. ಅತ್ಯಾಚಾರ, ಕೊಲೆಗಳು ಸಂಭವಿಸಿದಾಗಷ್ಟೇ ಸುದ್ದಿಯಾಗುತ್ತವೆ. ಆದರೆ ಸುದ್ದಿಯಾದಷ್ಟೇ ವೇಗದಲ್ಲಿ ಅದು ಮರೆಗೆ ಸರಿಯುತ್ತವೆ. ಯಾಕೆಂದರೆ, ಇಲ್ಲಿರುವ ಹೆಣ್ಣು ಮಕ್ಕಳ ಬದುಕು ರಾಜಕೀಯ ನಾಯಕರಿಗೆ ಯಾವುದೇ ರೀತಿಯಲ್ಲಿ ಮುಖ್ಯ ಅನ್ನಿಸಿರುವುದಿಲ್ಲ. ಹಿಂದೂ ಧರ್ಮದ ಗುತ್ತಿಗೆ ತೆಗೆದುಕೊಂಡ ಸಂಘಪರಿವಾರ, ಆರೆಸ್ಸೆಸ್ನಂತಹ ಸಂಘಟನೆಗಳಿಗೂ ಇಲ್ಲಿನ ಹೆಣ್ಣು ಮಕ್ಕಳ ಬದುಕಿನ ಬಗ್ಗೆ ಆಸಕ್ತಿಯಿಲ್ಲ. ಯಾಕೆಂದರೆ, ಇದು ಚುನಾವಣೆಗೆ ಯಾವ ರೀತಿಯಲ್ಲೂ ಅವರಿಗೆ ನೆರವನ್ನು ನೀಡುವುದಿಲ್ಲ. ಅವರ ದ್ವೇಷ ರಾಜಕಾರಣಕ್ಕೂ ಸಹಾಯ ಮಾಡುವುದಿಲ್ಲ. ಇದೀಗ ಬಿಡದಿಯ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ನ್ಯಾಯ ಸಿಗಬೇಕು ಎಂದು ತಳಸ್ತರದ ಬೇರೆ ಬೇರೆ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ಎಸ್.ಸಿ. ಎಸ್.ಟಿ. ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು, ಮೃತ ಸಂತ್ರಸ್ತೆಯ ಕುಟುಂಬದ ಒಬ್ಬರಿಗೆ ಸರಕಾರಿ ಉದ್ಯೋಗ ನೀಡಬೇಕು, ಕುಟುಂಬದ ತಾಯಿಗೆ ಪಿಂಚಣಿ ಸೌಲಭ್ಯ ಒದಗಿಸಬೇಕು ಎನ್ನುವ ಬೇಡಿಕೆಗಳನ್ನು ಈ ಸಂಘಟನೆಗಳು ಇಟ್ಟಿವೆ. ಎಲ್ಲಕ್ಕಿಂತ ಮುಖ್ಯವಾಗಿ, ನಗರ ಪ್ರದೇಶಕ್ಕೆ ಸಮೀಪ ಗುಡಿಸಲುಗಳಲ್ಲಿ ವಾಸಿಸುವ ಮಹಿಳೆಯರ, ಮಕ್ಕಳ ಬದುಕಿಗೆ ಭದ್ರತೆಯನ್ನು ನೀಡುವ ಹೊಣೆಗಾರಿಕೆಯನ್ನು ಸರಕಾರ ತೆಗೆದುಕೊಳ್ಳಬೇಕು ಎನ್ನುವ ಒತ್ತಾಯ ಬಲ ಪಡೆಯಬೇಕಾಗಿದೆ.
ಹುಬ್ಬಳ್ಳಿಯಲ್ಲಿ ಆರನೇ ತರಗತಿಯ 12ವರ್ಷದ ವಿದ್ಯಾರ್ಥಿಯೊಬ್ಬ 14 ವರ್ಷದ ವಿದ್ಯಾರ್ಥಿಗೆ ಇರಿದಿರುವ ಪ್ರಕರಣದಲ್ಲಿ ಇಡೀ ವ್ಯವಸ್ಥೆಯೇ ಆರೋಪಿ ಸ್ಥಾನದಲ್ಲಿದೆ. ಇಲ್ಲಿ ಕೊಲೆಯಾದ ವಿದ್ಯಾರ್ಥಿಯ ಜೊತೆಗೆ ಕೊಲೆಗೈದ ವಿದ್ಯಾರ್ಥಿಯ ಭವಿಷ್ಯವೂ ಕಮರಿ ಹೋಗಿದೆ. ಸಮಾಜದಲ್ಲಿ ದಿನನಿತ್ಯ ರೌಡಿಶೀಟರ್ಗಳ ವೈಭವೀಕರಣ, ಟಿ.ವಿ.ಗಳಲ್ಲಿ, ಮೊಬೈಲ್ಗಳಲ್ಲಿ ಅಪರಾಧಗಳನ್ನು ರೋಚಕಗೊಳಿಸುವುದು, ಹಿಂಸೆಯನ್ನು ಮೌಲ್ಯವೆನ್ನುವ ರೀತಿಯಲ್ಲಿ ಅಭಿವ್ಯಕ್ತಿಗೊಳಿಸುವುದು, ರೌಡಿಗಳ ಗ್ಯಾಂಗ್ವಾರ್ಗಳಲ್ಲಿ ಸತ್ತು ಹೋದವರನ್ನು ಹುತಾತ್ಮರಾಗಿಸುವುದು ಇವೆಲ್ಲವೂ ಮಕ್ಕಳ ಮನಸ್ಸಿನ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರುತ್ತಿವೆ. ಅಂತಿಮವಾಗಿ ಇದು, ಶಾಲಾಬ್ಯಾಗ್ನೊಳಗೆ ಮಕ್ಕಳು ಕೂಡ ಚಾಕು, ಚೂರಿಗಳನ್ನು ಒಯ್ಯುವ ಸ್ಥಿತಿಯನ್ನು ನಿರ್ಮಾಣ ಮಾಡುತ್ತವೆ. ಹುಬ್ಬಳ್ಳಿಯಲ್ಲಿ ನಡೆದ ಕೊಲೆಯಲ್ಲಿ ಸಮಾಜದ ಪಾತ್ರ ಅತಿ ದೊಡ್ಡದು. ಈ ಕೃತ್ಯ, ನಾವಿಂದು ಎಂತಹ ಕರಾಳ ಭವಿಷ್ಯದ ಕಡೆಗೆ ಹೆಜ್ಜೆಯಿಡುತ್ತಿದ್ದೇವೆ ಎನ್ನುವುದನ್ನು ಹೇಳಿದೆ. ಹಿರಿಯರು ತಮ್ಮನ್ನು ತಾವು ತಿದ್ದಿಕೊಳ್ಳುವ ಮೂಲಕ ತಮ್ಮ ಮಕ್ಕಳನ್ನು ಹಿಂಸೆಯ ಬಲೆಗೆ ಬೀಳದಂತೆ ರಕ್ಷಿಸಬೇಕಾಗಿದೆ. ಇದರಲ್ಲಿ ಪೊಲೀಸರ ಪಾತ್ರಕ್ಕಿಂತಲೂ ಪೋಷಕರ, ಶಿಕ್ಷಕರ ಹಾಗೆಯೇ ನಮ್ಮನ್ನಾಳುವ ರಾಜಕೀಯ ನಾಯಕರ ಪಾತ್ರ ಬಹುದೊಡ್ಡದಿದೆ.