‘ಡೋಂಟ್ ಟ್ರಬಲ್ ದಿ ಟ್ರಬಲ್’ ವಯಸ್ಕರೊಳಗಿನ ಮಗುವನ್ನು ಹೊರತರುವ ಚಿತ್ರ: ನಟ ಫಹಾದ್ ಫಾಸಿಲ್

‘ಡೋಂಟ್ ಟ್ರಬಲ್ ದಿ ಟ್ರಬಲ್’ ಚಿತ್ರದ ಪ್ರತಿ ಸಂಭಾಷಣೆಗಾಗಿ ತಾವು ಬಳಸಿದ ಮೂರು ಹಂತದ ಮಾನಸಿಕ ಪ್ರಕ್ರಿಯೆಯ ಬಗ್ಗೆ ಮತ್ತು ತೆಲುಗು ಚಿತ್ರೀಕರಣದ ಸೆಟ್ ನಲ್ಲಿ ಸಿಂಕ್ ಸೌಂಡ್ ಶಿಸ್ತನ್ನು ತರಲು ಹಠ ಹಿಡಿದಿರುವ ಬಗ್ಗೆ ಫಹಾದ್ ಫಾಸಿಲ್ ವಿವರಿಸಿದ್ದಾರೆ.
ಫಹಾದ್ ಫಾಸಿಲ್ ತಮ್ಮ ಮೊದಲ ತೆಲುಗು ಚಿತ್ರಕ್ಕಾಗಿ ಮಲಯಾಳಂನಲ್ಲಿ ಆಲೋಚಿಸಿ, ಆಲೋಚನೆಯನ್ನು ಇಂಗ್ಲಿಷ್ ಗೆ ಪರಿವರ್ತಿಸಿಕೊಂಡು ನಂತರ ಸಂಭಾಷಣೆಯನ್ನು ತೆಲುಗಿನಲ್ಲಿ ಹೇಳಿದ್ದಾರೆ. ತೆಲುಗು ಫಹಾದ್ ಅವರ ಮಾತೃಭಾಷೆಯಲ್ಲ. ಆದರೂ ಅವರು ಕೇವಲ ಸಂಭಾಷಣೆಗಳನ್ನು ಬಾಯಿಪಾಠ ಮಾಡದೆ, ಮೊದಲು ತಮ್ಮ ಮಾತೃಭಾಷೆಯಾದ ಮಲಯಾಳಂನಲ್ಲಿ ಅದರ ಭಾವನೆಯನ್ನು ಅರ್ಥೈಸಿಕೊಂಡು, ನಂತರ ಅದನ್ನು ಇಂಗ್ಲಿಷ್ ಗೆ ಭಾಷಾಂತರಿಸಿ ಯೋಚಿಸಿ, ಅಂತಿಮವಾಗಿ ತೆಲುಗಿನಲ್ಲಿ ನಟಿಸುತ್ತಿದ್ದರು. ಶೂಟಿಂಗ್ ಸೆಟ್ ನಲ್ಲಿ ಯಾರೋ ಡೈಲಾಗ್ ಹೇಳಿಕೊಡುವುದನ್ನು ಕೇಳಿ ನಟಿಸಲು ಅವರು ನಿರಾಕರಿಸಿದ್ದಾರೆ. ಭಾಷೆ ಬಾರದೆ ಇದ್ದರೂ ತಾವೇ ಸಂಭಾಷಣೆ ಕಲಿತು ಡಬ್ಬಿಂಗ್ ಕೂಡ ಮಾಡಿದ್ದಾರೆ.
ಮಲಯಾಳಂ ಸಿನಿಮಾಗಳಲ್ಲಿ ಹೆಚ್ಚಾಗಿ ಚಿತ್ರೀಕರಣದ ಸಮಯದಲ್ಲಿಯೇ ನಟರ ಧ್ವನಿಯನ್ನು ನೇರವಾಗಿ (ಸಿಂಕ್ ಸೌಂಡ್) ದಾಖಲಿಸಿಕೊಳ್ಳಲಾಗುತ್ತದೆ. ಆದರೆ ತೆಲುಗು ಚಿತ್ರರಂಗದಲ್ಲಿ ಡಬ್ಬಿಂಗ್ ಮಾಡಲಾಗುತ್ತದೆ. ಆ ತಾಂತ್ರಿಕ ವ್ಯವಸ್ಥೆ ಇಲ್ಲದಿದ್ದರೂ ಫಹಾದ್ ತಮ್ಮ ಮಲಯಾಳಂ ಚಿತ್ರರಂಗದ ಶಿಸ್ತನ್ನು ಅಳವಡಿಸಿಕೊಂಡಿದ್ದಾರೆ. ಹೈದರಾಬಾದ್ ನ 79 ವಿಭಿನ್ನ ನೈಜ ಸ್ಥಳಗಳಲ್ಲಿ ಸುಮಾರು ಒಂದೂವರೆ ವರ್ಷಗಳ ಕಾಲ ಅತ್ಯಂತ ತಾಳ್ಮೆಯಿಂದ ಈ ಚಿತ್ರಕ್ಕಾಗಿ ಅವರು ಕೆಲಸ ಮಾಡಿದ್ದಾರೆ. ಇದರ ಫಲಿತಾಂಶವೇ ‘ಡೋಂಟ್ ಟ್ರಬಲ್ ದಿ ಟ್ರಬಲ್’! ಇದು ಅವರ ಮೊದಲ ತೆಲುಗು ಚಿತ್ರ ಮತ್ತು ಸೋಲೋ ನಾಯಕರಾಗಿ ನಟಿಸಿದ್ದಾರೆ.
ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಫಹಾದ್ ಅವರು ‘ಡೋಂಟ್ ಟ್ರಬಲ್ ದಿ ಟ್ರಬಲ್’ ಚಿತ್ರೀಕರಣದ ಸಮಯದಲ್ಲಿ ಎದುರಿಸಿದ ಸವಾಲುಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ವೃತ್ತಿಜೀವನದ ಉದ್ದಕ್ಕೂ ಮಲಯಾಳಂನಲ್ಲಿ ನಟಿಸಿದ ಅವರು ‘ಡೋಂಟ್ ಟ್ರಬಲ್ ದಿ ಟ್ರಬಲ್’ ಸಿನಿಮಾಗಾಗಿ ತೆಲುಗಿನಲ್ಲಿ ಸೋಲೋ ನಾಯಕನಾಗಿ ನಟಿಸಬೇಕಾಗಿತ್ತು.
“ಅತಿದೊಡ್ಡ ಸವಾಲು ಎಂದರೆ ತೆಲುಗಿನಲ್ಲಿ ಆಲೋಚಿಸುವುದು. ನಾನು ಮಲಯಾಳಂನಲ್ಲಿ ಭಾವಿಸುತ್ತೇನೆ. ನಂತರ ಇಂಗ್ಲಿಷ್ ಗೆ ಪರಿವರ್ತಿಸಿ ತೆಲುಗಿನಲ್ಲಿ ಪ್ರದರ್ಶನ ನೀಡಿದ್ದೇನೆ. ಇದು ಅಷ್ಟು ಸುಗಮವಾಗಿರಲಿಲ್ಲ. ಪ್ರಾಥಮಿಕವಾಗಿ ಸವಾಲೆಂದರೆ ಭಾಷೆಯಲ್ಲಿ ಯೋಚಿಸಲು ಪ್ರಾರಂಭಿಸುವುದು. ಪದಗಳನ್ನು ಕಂಡುಹಿಡಿಯುವುದು. ಭಾಷೆಯನ್ನು ಸ್ವತಃ ಕಂಡುಹಿಡಿಯುವುದು. ಭಾಷೆಯನ್ನು ಸ್ವತಃ ಕಂಡುಹಿಡಿಯುವುದು. ಡಬ್ ಮಾಡುವಾಗ ಸಂಭಾಷಣೆಗಳನ್ನು ನಾನೇ ಹೇಳಬೇಕು ಎಂದು ಹಠ ಹಿಡಿದಿದ್ದೆ. ತವರಿನಲ್ಲಿ ನಾವು ‘ಸಿಂಕ್ ಸೌಂಡ್’ ಮಾಡುತ್ತೇವೆ. ಹೀಗಾಗಿ ನಾವು ನಮ್ಮ ಸಂಭಾಷಣೆಗಳನ್ನು ಕಂಠಪಾಠ ಮಾಡಬೇಕಾಗುತ್ತದೆ. ಇಲ್ಲೂ ಸಹ ನಾವು ಅದೇ ರೀತಿಯಲ್ಲಿ ಕೆಲಸವಾಗುವಂತೆ ನೋಡಿಕೊಂಡೆ. ಸೆಟ್ ನಲ್ಲಿ ಯಾವುದೇ ಪ್ರಾಂಪ್ಟಿಂಗ್ ಇರಲಿಲ್ಲ. ತೆಲುಗಿನಲ್ಲೇ ಚಿತ್ರೀಕರಣ ನಡೆಸಿದ್ದೇವೆ” ಎಂದು ಫಹಾದ್ ಫಾಸಿಲ್ ತಿಳಿಸಿದ್ದಾರೆ.
ತೆಲುಗಿನಲ್ಲಿ ಸಾಮಾನ್ಯವಾಗಿ ಸಿಂಕ್ ಸೌಂಡ್ ಮಾಡದೆ ಇರುವ ಕಾರಣ ಶೂಟಿಂಗ್ ಸಮಯದಲ್ಲಿ ಸೆಟ್ ನಲ್ಲಿ ಹೆಚ್ಚಿನ ಶಬ್ದಗಳಿಗೆ ಅನುಮತಿ ಇರುತ್ತದೆ. ಆದ್ದರಿಂದ ಫಹಾದ್ ತಮ್ಮ ಮಲಯಾಳಂ ಶಿಸ್ತನ್ನು ತೆಲುಗು ಸೆಟ್ ಗೆ ತಂದಿದ್ದರು. “ನಾವು ನಿರ್ದಿಷ್ಟವಾಗಿ ಸಿಂಕ್ ಸೌಂಡ್ ಮಾಡದೆ ಇದ್ದರೂ ಅದೇ ರೀತಿ ಚಿತ್ರೀಕರಣ ನಡೆಸುವುದನ್ನು ಖಚಿತಪಡಿಸಿಕೊಂಡೆ. ನಾನು ಸಣ್ಣ ತಂಡದ ಜೊತೆಗೆ ಕೆಲಸ ಮಾಡುತ್ತೇನೆ, ಅದನ್ನೇ ಪ್ರಯತ್ನಿಸೋಣ ಎಂದು ನಾನು ಅವರಿಗೆ ತಿಳಿಸಿದ್ದೆ” ಎಂದು ಅವರು ಹೇಳಿದ್ದಾರೆ.
‘ಡೋಂಟ್ ಟ್ರಬಲ್ ದಿ ಟ್ರಬಲ್’ ಚಿತ್ರದ ಕಥೆಯ ಬಗ್ಗೆ ತಮ್ಮ ಮೊದಲ ಅನಿಸಿಕೆ ನೆನಪಿಸಿಕೊಂಡ ಅವರು, “ಪ್ರಾಮಾಣಿಕವಾಗಿ ಹೇಳಬೇಕೆಂದರೆ ಜೀವನದಲ್ಲಿ ಮೊದಲ ಬಾರಿ ಇಂಥ ಕಥೆ ಕೇಳಿದ್ದೇನೆ ಎಂದು ಅನಿಸಿತ್ತು. ಮಲಯಾಳಂ ಸಿನಿಮಾಗಳು ವಿಭಿನ್ನ ಶೈಲಿ ಮತ್ತು ಸ್ವರೂಪ ಹೊಂದಿರುತ್ತವೆ. ಕೇರಳದಲ್ಲಿ ನಾನು ಮಾಡುವ ಸಿನಿಮಾಗಳು ಬಹಳ ಸೂಕ್ಷ್ಮವಾಗಿರುತ್ತವೆ. ನಾಟಕೀಯತೆ ಕಡಿಮೆ. ಹೀಗಾಗಿ ನಾನು ಬೇರೆಯದೇ ಆದ ವಾತಾವರಣದಲ್ಲಿ ಏನಾದರೂ ಪ್ರಯತ್ನಿಸಲು ಬಯಸಿದ್ದೆ. ಆಗ ಈ ಅವಕಾಶ ಒದಗಿಬಂತು. ಇಲ್ಲಿ ಅನೇಕ ಪ್ರತಿಭಾವಂತ ನಟರಿದ್ದಾರೆ. ಆದರೂ ಅವರು ನನ್ನನ್ನು ಸಂಪರ್ಕಿಸಿದರು. ಹೀಗಾಗಿ ಅವಕಾಶ ಕಳೆದುಕೊಳ್ಳಲು ಇಷ್ಟಪಡಲಿಲ್ಲ” ಎಂದು ಫಹಾದ್ ಹೇಳಿದ್ದಾರೆ.
‘ಡೋಂಟ್ ಟ್ರಬಲ್ ದಿ ಟ್ರಬಲ್’ ಸಿನಿಮಾವು ಪ್ರೀತಿ, ಕಾಳಜಿ ಮತ್ತು ಆರೈಕೆಯ ಕುರಿತಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. “ಮ್ಯಾಜಿಕ್ ಅಥವಾ ಅದೃಶ್ಯದಂತಹ ಅಂಶಗಳು ಇವೆಯಾದರೂ ಚಿತ್ರದ ತಿರುಳು ಆಳವಾಗಿ ವಾಸ್ತವಕ್ಕೆ ಹತ್ತಿರವಾಗಿದೆ” ಎಂದು ಅವರು ಹೇಳಿದ್ದಾರೆ. “ಮುಖ್ಯವಾಗಿ ಇದು ವಯಸ್ಕರಿಗಾಗಿ ಇರುವ ಮಕ್ಕಳ ಚಿತ್ರ. ವಯಸ್ಕರ ಒಳಗಿನ ಮಗುವನ್ನು ಸಿನಿಮಾ ಹೊರತರುತ್ತದೆ” ಎಂದು ಅವರು ತಿಳಿಸಿದ್ದಾರೆ.
ಅವರ ಪ್ರಕಾರ, ತೆಲುಗು ಚಿತ್ರರಂಗ ಬಹಳ ಶ್ರಮ ವಹಿಸುತ್ತದೆ. ತಮ್ಮ ಸಿನಿಮಾಗಳನ್ನು ದೇಶದ ಗಡಿ ದಾಟಿ ವಿದೇಶಗಳಿಗೆ ಕೊಂಡೊಯ್ಯಲು ಪ್ರಯತ್ನ ಮಾಡಿದ್ದಾರೆ. ಇದು ಸಂಪೂರ್ಣ ಯೋಜನೆಯ ವಿಷಯವಾಗಿದೆ. ಮಲಯಾಳಂ ನಿರ್ಮಾಣದ ಸಿನಿಮಾಗಳಿಗೂ ಇದೇ ರೀತಿಯ ವಿತರಣಾ ತಂತ್ರ ಅಳವಡಿಸಿಕೊಳ್ಳುವ ಆಶಯವನ್ನು ಅವರು ವ್ಯಕ್ತಪಡಿಸಿದರು. “ಆ ಬಗ್ಗೆ ಖಚಿತವಾಗಿ ಪರಿಶೀಲಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
“ಮಲಯಾಳಂನಲ್ಲಿ ಸ್ಟುಡಿಯೊಗಳ ಸೌಲಭ್ಯವಿಲ್ಲದ ಕಾರಣ ನೈಜ ಸ್ಥಳಗಳಲ್ಲೇ ಚಿತ್ರೀಕರಣ ನಡೆಸುತ್ತೇವೆ. ಹೀಗಾಗಿ ಜನನಿಬಿಡ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡುವಾಗ ತೊಂದರೆಯಾಗಲಿಲ್ಲ. ನಿಯಂತ್ರಿತ ವಾತಾವರಣದಲ್ಲಿ ನಾನು ಚಿತ್ರೀಕರಿಸಿದ ಮೊದಲ ಚಿತ್ರ ‘ಪುಷ್ಪ’. ಹೀಗಾಗಿ ತೆಲುಗು ಚಿತ್ರರಂಗ ಕಲಿಸಿದ ಮತ್ತೊಂದು ವಿಷಯವಿದು” ಎಂದು ಅವರು ಅಭಿಪ್ರಾಯಪಟ್ಟರು.






