ಮೋಟಿ ಮ್ಯಾಜಿಕ್: ಮುಂಬೈನಲ್ಲಿ ಮುಳುಗಿದ ಇಂಗ್ಲೆಂಡ್!

PC: TOI
ಮುಂಬೈ: ಎಡಗೈ ಸ್ಪಿನ್ನರ್ ಗುಡಕೇಶ್ ಮೋಟಿಯವರ ಅದ್ಭುತ ಕೈಚಳಕಕ್ಕೆ ಎದುರಾಳಿ ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕ ಕುಸಿದು, ಟಿ20 ವಿಶ್ವಕಪ್ ಲೀಗ್ ಹಂತದಲ್ಲಿ ವೆಸ್ಟ್ಇಂಡೀಸ್ ತಂಡ 30 ರನ್ಗಳ ಅಚ್ಚರಿಯ ಜಯ ಸಾಧಿಸಿದೆ.
ಶೆರ್ಫನ್ ರುದರ್ಫೋರ್ಡ್ ಅವರ ಅಜೇಯ 76 ರನ್ಗಳ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 196 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿದ ವೆಸ್ಟ್ಇಂಡೀಸ್, ಎದುರಾಳಿಯನ್ನು 19 ಓವರ್ಗಳಲ್ಲಿ 166 ರನ್ಗಳಿಗೆ ನಿಯಂತ್ರಿಸಿತು.
ಇಂಗ್ಲೆಂಡ್ ತಂಡ ಬಿರುಸಿನ ಆರಂಭ ಪಡೆದರೂ, ಮೋಟಿ ಅದ್ಭುತ ಪ್ರದರ್ಶನ ತೋರಿ ಟಾಮ್ ಬಾಂಟನ್, ಜಾಕೋಬ್ ಬೆಥೆಲ್ ಹಾಗೂ ನಾಯಕ ಹ್ಯಾರಿ ಬ್ರೂಕ್ ಅವರ ವಿಕೆಟ್ ಕಿತ್ತರು. 33 ರನ್ಗಳಿಗೆ 3 ವಿಕೆಟ್ ಕಿತ್ತ ಎಡಗೈ ಸ್ಪಿನ್ನರ್ ವಿಂಡೀಸ್ ಗೆಲುವಿನ ರೂವಾರಿ ಎನಿಸಿದರು.
ಎಂಟನೇ ಓವರ್ನಲ್ಲಿ 2 ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿದ್ದ ಇಂಗ್ಲೆಂಡ್ ಪರ ಹ್ಯಾರಿ ಬ್ರೂಕ್ 17 ರನ್ಗಳಿಗೆ ಔಟಾದಾಗ, 14ನೇ ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತ್ತು. ಸ್ಯಾಮ್ ಕರನ್ 30 ಎಸೆತಗಳಲ್ಲಿ 43 ರನ್ ಸಿಡಿಸಿ ಇಂಗ್ಲೆಂಡ್ ಗೆಲುವಿನ ಆಸೆಯನ್ನು ಜೀವಂತವಿರಿಸಿದರೂ, ರನ್ಔಟ್ಗೆ ಬಲಿಯಾದರು. ಸಿ ಗುಂಪಿನಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿರುವ ವೆಸ್ಟ್ಇಂಡೀಸ್ ತಂಡ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿ, ಸೂಪರ್8 ರೇಸ್ನಲ್ಲಿ ಮುಂಚೂಣಿಯಲ್ಲಿದೆ.
ಜೇಸನ್ ಹೋಲ್ಡರ್ ಅವರ ಮೊದಲ ಓವರ್ನಲ್ಲೇ ಎರಡು ಸಿಕ್ಸರ್ ಹಾಗೂ ಮೂರು ಬೌಂಡರಿ ಸಹಿತ 24 ರನ್ ದೋಚಿದ ಫಿಲ್ ಸಾಲ್ಟ್ ಭರ್ಜರಿ ಆರಂಭ ನೀಡಿದರು. ರೊಮಾರಿಯೊ ಶೆಫರ್ಡ್ ಅವರ ನಾಲ್ಕನೇ ಓವರ್ನಲ್ಲಿ ರುದರ್ಫೋರ್ಡ್ಗೆ ಕ್ಯಾಚ್ ನೀಡಿ ಔಟಾಗುವ ಮುನ್ನ ಸಾಲ್ಟ್ 30 ರನ್ ಗಳಿಸಿದ್ದರು.
ಪವರ್ಪ್ಲೇ ಕೊನೆಗೊಂಡಾಗ 1 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದ್ದ ಇಂಗ್ಲೆಂಡ್ ತಂಡದ ನಾಗಾಲೋಟಕ್ಕೆ ವೆಸ್ಟ್ಇಂಡೀಸ್ ಸ್ಪಿನ್ನರ್ಗಳು ತಡೆ ಹಾಕಿದರು.






