ಅಸ್ಸಾಂನಲ್ಲಿ ಬಲವಂತದ ತೆರವು ಕಾರ್ಯಾಚರಣೆ: ವಿಮೆನ್ ಇಂಡಿಯಾ ಮೂವ್‌ಮೆಂಟ್ ಖಂಡನೆ
ನ್ಯಾಯಾಂಗದ ಹಸ್ತಕ್ಷೇಪ ಹಾಗೂ ಮಾನವೀಯ ಹೊಣೆಗಾರಿಕೆಗೆ ಕರೆ

ಮಂಗಳೂರು: ಅಸ್ಸಾಂ ರಾಜ್ಯದ ಗೋಲ್ಪಾರಾ, ಧುಬ್ರಿ, ನಲ್ಬಾರಿ ಮತ್ತು ಲಖಿಂಪುರ್ ಜಿಲ್ಲೆಗಳಲ್ಲಿ 2025ರ ಜುಲೈ ತಿಂಗಳಲ್ಲಿ ನಡೆದ 8000ಕ್ಕಿಂತ ಹೆಚ್ಚು ಮನೆಗಳ ಬಲವಂತದ ತೆರವು ಮತ್ತು ಧ್ವಂಸ ಕಾರ್ಯಾಚರಣೆಗಳ ವಿರುದ್ಧ ವಿಮೆನ್ ಇಂಡಿಯಾ ಮೂವ್‌ಮೆಂಟ್ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದೆ.
ಈಬಗ್ಗೆ ಪತ್ರಿಕಾ ಪ್ರಕಟನೆ ಮೂಲಕ ಪ್ರತಿಕ್ರಿಯಿಸಿರುವ ವಿಮೆನ್ ಇಂಡಿಯಾ ಮೂವ್‌ಮೆಂಟ್ ನ ರಾಷ್ಟ್ರೀಯ ಅಧ್ಯಕ್ಷೆ ಯಾಸ್ಮಿನ್ ಇಸ್ಲಾಂ, ಈ ಕ್ರಮವು ಯಾವುದೇ ಸಮಗ್ರ ಪುನರ್ವಸತಿ ಯೋಜನೆ ಇಲ್ಲದೆ, ಅಥವಾ ಪ್ರಸ್ತುತ ಕುಟುಂಬಗಳ ಮೂಲಭೂತ ಹಕ್ಕುಗಳಿಗೆ ಗೌರವವಿಲ್ಲದೆ ಜರುಗಿದ್ದು ಆಕ್ಷೇಪನೀಯವಾಗಿದೆ ಎಂದು ಹೇಳಿದ್ದಾರೆ.
ಈ ಕುಟುಂಬಗಳಲ್ಲಿ ಅನೇಕರು ಐದು ದಶಕಕ್ಕೂ ಹೆಚ್ಚು ಸಮಯದಿಂದ ಈ ಪ್ರದೇಶದಲ್ಲಿ ವಾಸವಿದ್ದರು. “ಅರಣ್ಯ ಭೂಮಿ” ಎಂದು ಈ ಪ್ರದೇಶವನ್ನು ಘೋಷಿಸಿ ಈ ರೀತಿಯ ತ್ವರಿತ ಕ್ರಮ ಕೈಗೊಂಡಿರುವುದು ನಿರ್ದಯವಾದುದು ಮಾತ್ರವಲ್ಲ, ಅದು ಮಾನವೀಯತೆಯ ವಿರುದ್ಧವೂ ಆಗಿದೆ. ಯಾವುದೇ ಪರಿಹಾರವಿಲ್ಲದೆ ಅಥವಾ ಪುನರ್ವಸತಿ ಯೋಜನೆಗಳಿಲ್ಲದೆ ಪಾಲನಾ ಅಥವಾ ಪರಿಸರ ಸಂಬಂಧಿತ ಕಾರಣಗಳ ಹೆಸರಿನಲ್ಲಿ ಕೈಗೊಂಡ ಈ ಕ್ರಮವು ದುರ್ಬಲ ಸಮುದಾಯಗಳನ್ನು ಗುರಿಯಾಗಿಸುವ ಆತಂಕಕಾರಿ ಪ್ರವೃತ್ತಿಯನ್ನು ತೋರಿಸುತ್ತದೆ ಎಂದಿದ್ದಾರೆ.
ಇದರಲ್ಲಿ ಪ್ರಶ್ನಿಸಬೇಕಾದ ಕೆಲವು ವಿಷಯಗಳು ಇವೆ. ಇಲ್ಲಿನ ನಿವಾಸಿಗಳು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ರೇಶನ್ ಕಾರ್ಡ್ ಮತ್ತು ಸ್ಥಳೀಯ ತೆರಿಗೆ ರಸೀದಿಗಳನ್ನು ಹೊಂದಿದ್ದರೆ, ಸರ್ಕಾರ ಹೇಗೆ ಈ ಮನೆಗಳನ್ನು ಅಕ್ರಮವೆಂದು ಹೇಳುತ್ತಿದೆ ? ಈ ನಿವಾಸಿಗಳು ಕಳೆದ ನಾಲ್ಕು–ಐದು ದಶಕಗಳಿಂದ ಈ ಅನುಮಾನದ “ಅರಣ್ಯ ಭೂಮಿಯಲ್ಲಿ” ವಾಸಿಸುತ್ತಿದ್ದರೆ, ಅಸ್ಸಾಂ ಸರ್ಕಾರ ಈ ಬಡವರ ಪುನರ್ವಸತಿಗಾಗಿ ಯಾವುದೇ ಯೋಜನೆ ಏಕೆ ರೂಪಿಸಲಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಈ ಸಾಮೂಹಿಕ ಮನೆಧ್ವಂಸ ಕಾರ್ಯವು ಅಸಾಂವಿಧಾನಿಕವಾಗಿದೆ ಮತ್ತು ರಾಜ್ಯ ಅಧಿಕಾರದ ಗಂಭೀರ ದುರ್ಬಳಕೆಗೂ ಉದಾಹರಣೆಯಾಗಿದೆ. ಸಮರ್ಪಕ ಪುನರ್ವಸತಿ ಅಥವಾ ನ್ಯಾಯಸಮ್ಮತ ಪರಿಹಾರವಿಲ್ಲದೆ ನಡೆಸಿದ ಈ ರೀತಿಯ ಸ್ಥಳಾಂತರ, ಭಾರತ ಸಂವಿಧಾನದ ಅನುಚ್ಛೇದ 21 ರಲ್ಲಿರುವ ಬದುಕುವ ಹಕ್ಕು ಮತ್ತು ಮಾನವೀಯ ಘನತೆ ಗೌರವದ ಹಕ್ಕನ್ನು ಉಲ್ಲಂಘಿಸುತ್ತದೆ. ಇದಲ್ಲದೆ, ಸಂತ್ರಸ್ತರ ಸಮುದಾಯದ ಗುರುತಿನ ಬಗ್ಗೆ ಇರುವ ಮೌನ, ಕಾನೂನುಗಳ ಅನುಷ್ಠಾನದ ಬಗ್ಗೆ ಗಂಭೀರ ಚಿಂತನೆಗಳನ್ನು ಎಬ್ಬಿಸುತ್ತದೆ. ಇದರಿಂದಾಗಿ ಆ ಪ್ರದೇಶದ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಭಯ ಮತ್ತು ಅನುಮಾನ ಹೆಚ್ಚಾಗುತ್ತಿದೆ ಎಂದಿದ್ದಾರೆ.
ಆದ್ದರಿಂದ, ನಾವು ಗೌರವಾನ್ವಿತ ಗೌಹಾಟಿ ಹೈಕೋರ್ಟ್ ಮತ್ತು ಭಾರತದ ಸುಪ್ರೀಂ ಕೋರ್ಟ್ ಗಳು ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ ಅಸ್ಸಾಂ ಸರ್ಕಾರಕ್ಕೆ ಕೆಳಗಿನ ನಿರ್ದೇಶನ ನೀಡಲು ವಿನಂತಿಸುತ್ತೇವೆ:
ತಕ್ಷಣವೇ ಈ ಮನೆ ಧ್ವಂಸ ಕಾರ್ಯಾಚರಣೆಯನ್ನು ನಿಲ್ಲಿಸಬೇಕು. ಸಂತ್ರಸ್ತ ಕುಟುಂಬಗಳಿಗೆ ತಾತ್ಕಾಲಿಕ ಆಶ್ರಯ ಮತ್ತು ತುರ್ತು ಸಹಾಯ ಒದಗಿಸಬೇಕು. ಪುನರ್ವಸತಿ ಮತ್ತು ಪರಿಹಾರದ ಸ್ಪಷ್ಟ ಮತ್ತು ಪಾರದರ್ಶಕ ಯೋಜನೆ ನೀಡಬೇಕು. 50 ವರ್ಷಗಳ ಬಳಿಕ ಜನಸಂಚಾರಭರಿತ ಪ್ರದೇಶವನ್ನು ಏಕೆ ಅರಣ್ಯ ಭೂಮಿಯಾಗಿ ವರ್ಗೀಕರಿಸಲಾಗಿದೆ ಎಂಬುದಕ್ಕೆ ನ್ಯಾಯೋಚಿತ ವಿವರಣೆ ನೀಡಬೇಕು. ಇದು ಕೇವಲ ಕಾನೂನು ಸಮಸ್ಯೆಯಲ್ಲ – ಇದು ಮಾನವೀಯ ಸಂಕಷ್ಟವಾಗಿದೆ. ಪ್ರಜಾಸತ್ತಾತ್ಮಕ ಭಾರತವು, ಇಂತಹ ಧ್ವಂಸಾತ್ಮಕ ಕ್ರಮಗಳನ್ನು ಯಾವುದೇ ಹೊಣೆಗಾರಿಕೆ ಇಲ್ಲದೆ ಅನುಮತಿಸಲು ಸಾಧ್ಯವಿಲ್ಲ. ನ್ಯಾಯದ ಬೆಳಕಲ್ಲಿ ಜನರ ಭವಿಷ್ಯ ನಿರ್ಧಾರವಾಗಬೇಕು ಹೊರತು ಬುಲ್ಡೋಜರ್‌ಗಳ ಶಬ್ದಗಳಲ್ಲಿ ಅಲ್ಲ ಎಂದು ಹೇಳಿದ್ದಾರೆ.







