ಜನ್ ಸುರಾಜ್ ಪಕ್ಷದ ಪ್ರಥಮ ಅಧ್ಯಕ್ಷರಾಗಿ ಬಿಜೆಪಿಯ ಮಾಜಿ ಸಂಸದ

ಸುದ್ದಿಗೋಷ್ಟಿಯಲ್ಲಿ ಉದಯ ಸಿಂಗ್ ಮಾತನಾಡುತ್ತಿರುವುದು PC: x.com/BaatBiharKii
ಪಾಟ್ನಾ: ಹಿರಿಯ ರಾಜಕಾರಣಿ ಮತ್ತು ಬಿಜೆಪಿಯ ಮಾಜಿ ಸಂಸದ ಉದಯ ಸಿಂಗ್ ಅಲಿಯಾಸ್ ಪಪ್ಪು ಸಿಂಗ್ ಅವರನ್ನು ಜನ್ ಸುರಾಜ್ ಪಕ್ಷದ ಮೊಟ್ಟಮೊದಲ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಪ್ರಕಟಿಸಿದ್ದಾರೆ.
ಪಪ್ಪು ಸಿಂಗ್ ಅವರು ಆರಂಭದಿಂದಲೂ ಜನ ಸುರಾಜ್ ಪಕ್ಷದ ಜತೆ ಇದ್ದರು. ಆದರೆ ಸೋಮವಾರ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಗೊಳ್ಳಲು ನಿರ್ಧರಿಸಿದ್ದಾರೆ ಎಂದು ಸಿಂಗ್ ಅವರನ್ನು ಸ್ವಾಗತಿಸುವ ಸಂದರ್ಭದಲ್ಲಿ ಪ್ರಶಾಂತ್ ಕಿಶೋರ್ ಹೇಳಿದರು. 150 ಮಂದಿಯ ಕೋರ್ ಕಮಿಟಿ, ಪಪ್ಪು ಸಿಂಗ್ ಅವರನ್ನು ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಮಾಡಿದೆ ಎಂದು ವಿವರಿಸಿದರು.
ಇದೀಗ ಜನರನ್ನು ತಲುಪುವ ನಿಟ್ಟಿನಲ್ಲಿ ಪಕ್ಷ ಹೆಜ್ಜೆ ಇಡಲಿದೆ; ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಉದಯಸಿಂಗ್ ಮತ್ತು ಆರ್ಸಿಪಿ ಸಿಂಗ್ ಅವರಂಥ ಮುಖಂಡರಿಗೆ ವಹಿಸಲಾಗುವುದು ಎಂದು ಹೇಳಿದರು. ಮೇ 20ರಿಂದ ಮತ್ತೆ ಪಾದಯಾತ್ರೆ ಮುಂದುವರಿಸುವುದಾಗಿ ಅವರು ಸ್ಪಷ್ಟಪಡಿಸಿದರು.
ಪುರ್ನಿಯಾ ಲೋಕಸಭಾ ಕ್ಷೇತ್ರದಿಂದ ಪಪ್ಪು ಸಿಂಗ್ 2004 ಮತ್ತು 2009ರಲ್ಲಿ ಬಿಜೆಪಿ ಟಿಕೆಟ್ ನಲ್ಲಿ ಗೆದ್ದಿದ್ದರು. 2014 ಮತ್ತು 2019ರಲ್ಲಿ ಕಾಂಗ್ರೆಸ್ ಟಿಕೆಟ್ ನಲ್ಲಿ ಸೋಲು ಅನುಭವಿಸಿದ್ದರು. ಈ ಕ್ಷೇತ್ರ ಬಿಜೆಪಿ-ಜೆಡಿಯು ಮೈತ್ರಿಯ ಹಿನ್ನೆಲೆಯಲ್ಲಿ ಮಿತ್ರ ಪಕ್ಷಕ್ಕೆ ಹೋಗಿತ್ತು. 2024ರ ಲೋಕಸಭಾ ಚುನಾವಣೆಯಲ್ಲಿ ಪಪ್ಪು ಸಿಂಗ್ ಅವರು ಪಕ್ಷೇತರ ಅಭ್ಯರ್ಥಿ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರನ್ನು ಬೆಂಬಲಿಸಿದ್ದರು. ಪಪ್ಪು ಯಾದವ್ ಪಕ್ಷೇತರರಾಗಿ ಲೋಕಸಭೆ ಪ್ರವೇಶಿಸಿದ್ದರು.