ತೆಂಡೂಲ್ಕರ್- ಸೆಹ್ವಾಗ್ನಿಂದ ಗಿಲ್-ಜೈಸ್ವಾಲ್ವರೆಗೆ; ಲೀಡ್ಸ್ ಟೆಸ್ಟ್ನ ಮೊದಲ ದಿನ ಇತಿಹಾಸ ಸೃಷ್ಟಿ

PC: x.com/mykhelcom
ಹೊಸದಿಲ್ಲಿ: ಭಾರತದ ಹೊಸ ಟೆಸ್ಟ್ ಯುಗ ವಿನೂತನ ಶೈಲಿ, ನೆಮ್ಮದಿ ಮತ್ತು ಇತಿಹಾಸ ಸೃಷ್ಟಿಯೊಂದಿಗೆ ಶುಕ್ರವಾರ ಆರಂಭವಾಗಿದೆ. ಹೆಡಿಂಗ್ಲೆಯಲ್ಲಿ ಅತಿಥೇಯ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ನ ಮೊದಲ ದಿನ ಭಾರತದ ಪರ ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಶತಕ ಸಾಧಿಸಿ ಭಾರತಕ್ಕೆ ಮೊದಲ ದಿನದ ಗೌರವ ಸಂಪಾದಿಸಿಕೊಟ್ಟರು.
ದಿನದ ಅಂತ್ಯಕ್ಕೆ ಭಾರತ 3 ವಿಕೆಟ್ ನಷ್ಟಕ್ಕೆ 359 ರನ್ ಗಳಿಸಿದ್ದು, ಇದು ವಿದೇಶಿ ನೆಲದಲ್ಲಿ ಮೊದಲ ದಿನ ಭಾರತ ಗಳಿಸಿದ ಮೂರನೇ ಗರಿಷ್ಠ ಮೊತ್ತವಾಗಿದೆ. ಇದಕ್ಕೂ ಮುನ್ನ 2017ರಲ್ಲಿ ಗಾಲೆಯಲ್ಲಿ ಶ್ರೀಲಂಕಾ ವಿರುದ್ಧ (399/3) ಮತ್ತು 2001ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬ್ಲೋಮ್ಫಾಂಟೈನ್ ನಲ್ಲಿ (372/7) ಇದಕ್ಕಿಂತ ಹೆಚ್ಚು ಮೊತ್ತ ಗಳಿಸಿತ್ತು. ಈ ಮೂರು ನಿದರ್ಶನಗಳನ್ನು ಹೊರತುಪಡಿಸಿದರೆ 2004ರಲ್ಲಿ ಮುಲ್ತಾನ್ ನಲ್ಲಿ ಪಾಕಿಸ್ತಾನದ ವಿರುದ್ಧ (356/2) ಮತ್ತು 2016ರಲ್ಲಿ ನಾರ್ತ್ ಸೌಂಡ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ (302/4) 300ಕ್ಕಿಂತ ಹೆಚ್ಚು ರನ್ ಮೊದಲ ದಿನ ಕಲೆಹಾಕಿತ್ತು.
ಭಾರತದ ಟೆಸ್ಟ್ ಇತಿಹಾಸದಲ್ಲಿ ಇದಕ್ಕೂ ಮುನ್ನ ತೆಂಡೂಲ್ಕರ್ ಹಾಗೂ ಸೆಹ್ವಾಗ್ 2001ರಲ್ಲಿ ಬೊಲೇಮ್ಫೌಂಟೇನ್ನಲ್ಲಿ ಹಾಗೂ ಶಿಖರ್ ಧವನ್ ಮತ್ತು ಪೂಜಾರ 2017ರಲ್ಲಿ ಗಾಲೆಯಲ್ಲಿ ಮೊದಲ ದಿನ ಇಬ್ಬರು ಭಾರತೀಯರು ಶತಕ ಗಳಿಸಿದ್ದರು. ಹೆಡಿಂಗ್ಲೆ ಟೆಸ್ಟ್ ನ ಮೊದಲ ದಿನ ಭಾರತದ ಐಕಾನಿಕ್ ತಾರೆಗಳಂತೆ ಭಾರತದ ಹೊಸ ಪೀಳಿಗೆಯ ಆಟಗಾರರನ್ನು ವ್ಯಾಖ್ಯಾನಿಸಿತು. ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ಮೊದಲ ಬಾರಿಗೆ ವಹಿಸಿಕೊಂಡ ಗಿಲ್ ಅಜೇಯ 127 ರನ್ ಗಳಿಸಿದರು. ಇದು ಏಷ್ಯಾ ಹೊರಗೆ ಗಿಲ್ ಅವರ ಮೊದಲ ಶತಕವಾಗಿದೆ. ಕಳೆದ ಹದಿನಾಲ್ಕು ವರ್ಷಗಳಲ್ಲಿ ಆಧುನಿಕ ಯುಗದ ದಂತಕಥೆಗಳು ಎನಿಸಿದ ಕೊಹ್ಲಿ, ರೋಹಿತ್ ಹಾಗೂ ಅಶ್ವಿನ್ ಇಲ್ಲದೇ ಮೊದಲ ಬಾರಿಗೆ ತಂಡವನ್ನು ಮುನ್ನಡೆಸಿದ ಅತೀವ ಒತ್ತಡದ ನಡುವೆಯೂ ಅದ್ಭುತ ಪ್ರದರ್ಶನ ತೋರಿದರು.
ಆತ್ಮವಿಶ್ವಾಸದಿಂದ ಆಡಿದ ಜೈಸ್ವಾಲ್ 101 ರನ್ ಗಳಿಸಿ ಹೆಡಿಂಗ್ಲೆಯಲ್ಲಿ ಟೆಸ್ಟ್ ಶತಕ ಗಳಿಸಿದ ಮೊದಲ ಏಷ್ಯನ್ ಕ್ರಿಕೆಟರ್ ಎಂಬ ದಾಖಲೆ ನಿರ್ಮಿಸಿದರು. ಆಕರ್ಷಕ ಆಫ್ಸೈಡ್ ಆಟ ಹಾಗೂ ಮಿಂಚಿನ ಬೌಂಡರಿಗಳೊಂದಿಗೆ ಚಹಾ ವಿರಾಮದ ವರೆಗೂ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿದ ಜೈಸ್ವಾಲ್ ಅಂತಿಮವಾಗಿ ಬೆನ್ ಸ್ಟೋಕ್ಸ್ ಅವರಿಗೆ ವಿಕೆಟ್ ಒಪ್ಪಿಸಿದರು.
ಮುರಿಯದ ನಾಲ್ಕನೇ ವಿಕೆಟ್ ಗೆ 176 ರನ್ ಗಳನ್ನು ಕಲೆ ಹಾಕಿರುವ ಭಾರತ, ಆರಂಭಿಕ ಪರಿಸ್ಥಿತಿಯ ಲಾಭ ಪಡೆಯುವ ಯೋಜನೆಯಲ್ಲಿದ್ದ ಅತಿಥೇಯರಿಗೆ ನಿರಾಸೆ ಉಂಟುಮಾಡಿತು.







