ಸ್ವಯಂಘೋಷಿತ ಸಂಶೋಧಕ ರವಿ ಹಂಜ್ ವಿರುದ್ಧ ಕ್ರಮ ಅವಶ್ಯ: ಸಚಿವ ಈಶ್ವರ ಖಂಡ್ರೆ

ಗದಗ: ಪ್ರಚೋದನಕಾರಿ ಹೇಳಿಕೆ ಮೂಲಕ ಬಸವ ಭಕ್ತರ ಮನಸ್ಸಿಗೆ ಘಾಸಿ ಉಂಟುಮಾಡಿದ ಸ್ವಯಂಘೋಷಿತ ಸಂಶೋಧಕ ರವಿ ಹಂಜ್ ವಿರುದ್ಧ ಕಾನೂನು ಕ್ರಮವಾಗಬೇಕು ಎಂದು ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಣ್ಣನವರ ತತ್ವ ಅನುಕರಣೀಯ. ಸಮಾನತೆಗಾಗಿ ಹೋರಾಡಿದ ಅವರು 12ನೇ ಶತಮಾನದಲ್ಲೇ ಪ್ರಜಾಪ್ರಭುತ್ವದ ಪರಿಕಲ್ಪನೆ ಜಾರಿಗೆ ತಂದರು. ಅವರನ್ನು ಯಾರೇ ಅವಮಾನ ಮಾಡಿದರೂ ನಾವು ಸಹಿಸಲ್ಲ ಎಂದರು.
ಅವಹೇಳನಕಾರಿಯಾದ ಬಸವ ಮಂಟಪ ಕೃತಿ ರಚನೆ ಮಾಡಿದ್ದು ಅಕ್ಷ್ಯಮ್ಯ ಅಪರಾಧ. ಸಂಪುಟ ಸಭೆಯಲ್ಲಿ ಪುಸ್ತಕ ಮುಟ್ಟಗೋಲಿಗೆ ಒತ್ತಾಯ ಮಾಡಲಾಗಿತ್ತು. ಅದರಂತೆ, ರಾಜ್ಯ ಸರ್ಕಾರದಿಂದ ಮುಟ್ಟುಗೋಲಿಗೆ ಕ್ರಮ ವಹಿಸಿದೆ ಎಂದು ಹೇಳಿದರು.
ಚಳಿಗಾಲದ ಬಳಿಕ ಅಧಿವೇಶನದ ಮೂರನೇ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಳ್ಳುವ ಕುರಿತು ಬಿಜೆಪಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಮಾಜಿ ಸಚಿವ ಶ್ರೀರಾಮುಲುಗೆ ಮಾಡಲು ಕೆಲಸ ಇಲ್ಲ. ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದಾರೆ. ಅವರ ಹೇಳಿಕೆ ಚರ್ಚೆಯೇ ಆಗಬಾರದು. ಮುಖ್ಯಮಂತ್ರಿ ವಿರುದ್ಧ ಶಾಸಕರಿಂದ ಸಹಿ ಸಂಗ್ರಹವಾಗುತ್ತಿಲ್ಲ. ವಿಧಾನಸಭಾ ಕ್ಷೇತ್ರಗಳಿಗೆ ಸಾವಿರಾರು ಕೋಟಿ ರೂ. ಅನುದಾನ ಕೊಟ್ಟಿರುವುದರಿಂದ ಯಾರಿಗೂ ಅಸಮಾಧಾನ ಇಲ್ಲ ಎಂದು ತಿಳಿಸಿದರು.




