‘ಬಸವ ಮಂಟಪ’ ಕೃತಿ ವಿವಾದ: ರವಿ ಹಂಜ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಾಗತಿಕ ಲಿಂಗಾಯತ ಮಹಾಸಭಾ ಧರಣಿ

ಗದಗ: ಬಸವ ಮಂಟಪ ಕೃತಿಕಾರ ರವಿ ಹಂಜ್‌ನನ್ನು ದೇಶದಿಂದ ಗಡಿಪಾರು ಮಾಡಬೇಕು, ಈ ಕುರಿತು ಸರಣಿ ಅಂಕಣ ಪ್ರಕಟಿಸಿದ ಪತ್ರಕರ್ತ ವಿಶ್ವೇಶ್ವರ ಭಟ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನಗರದಲ್ಲಿ ಸೋಮವಾರ ಧರಣಿ ನಡೆಸಲಾಯಿತು.
ಇಲ್ಲಿನ ಮಹಾತ್ಮಾ ಗಾಂಧಿ ವೃತ್ತದಲ್ಲಿ ಸಭೆ ನಡೆಸಿದ ಜಾಗತಿಕ ಲಿಂಗಾಯತ ಮಹಾಸಭಾ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಾಹಿತಿ ಬಸವರಾಜ ಸೂಳಿಬಾವಿ ಮಾತನಾಡಿ ‘ಇಂತಹ ವ್ಯಕ್ತಿಗಳಿಗೆ ಆರೆಸ್ಸೆಸ್‌ನಂತಹ ಶಕ್ತಿಗಳು ಬೆಂಬಲ ನೀಡುತ್ತಿವೆ. ಈ ಎಲ್ಲ ದುಷ್ಟ ಶಕ್ತಿಗಳನ್ನು ಶಿಕ್ಷಿಸಬೇಕು. ಅದಕ್ಕಾಗಿ ವಿಶೇಷ ತನಿಖಾ ತಂಡ ರಚಿಸಬೇಕು. ನಿವೃತ್ತ ನ್ಯಾಯಾಧೀಶರಿಂದ ಮೇಲ್ವಿಚಾರಣೆ ನಡೆಸಬೇಕು’ ಎಂದು ಆಗ್ರಹಿಸಿದರು.
‘ಸಂಶೋಧಕ ಎಂ.ಎಂ. ಕಲಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಕೊಂದವರು ಜೈಲಿನಿಂದ ಹೊರಬಂದಿದ್ದಾರೆ. ಅವರ ಹಿಂದಿದ್ದ ಶಕ್ತಿಗಳಿಗೆ ಈವರೆಗೆ ಶಿಕ್ಷೆ ಆಗಿಲ್ಲ. ನಮ್ಮ ಸ್ವಾಮೀಜಿಗಳ ಮೂಲಕವೇ ಆ ಶಕ್ತಿಗಳು ಪರಂಪರೆ ವಿರುದ್ಧ ಮಾತನಾಡಿಸುತ್ತಿವೆ. ಈ ಕುತಂತ್ರ ಅರಿತಾಗ ಮಾತ್ರ ಬಸವಧರ್ಮ ಉಳಿಯುತ್ತದೆ. ಇದಕ್ಕಾಗಿ ಬಸವಪ್ರೇಮಿಗಳು ಒಂದಾಗಬೇಕು’ ಎಂದು ಕರೆ ನೀಡಿದರು.
ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ರಾಜು ಗುಡಿಮನಿ ಮಾತನಾಡಿ ‘ಎಲ್ಲರನ್ನೂ ಸಮಾನವಾಗಿ ಕಂಡವರು ಬಸವಣ್ಣ. ಅವರ ಹೆಸರಿಗೆ ಕಪ್ಪುಚುಕ್ಕಿ ತರಲು ಬಯಸುವುದು ಕನಸಿನ ಮಾತು. ಧರ್ಮ ರಕ್ಷಣೆ ಮಾಡುವವರು ವಿಭೂತಿ, ಲಿಂಗ ಧರಿಸಬೇಕು. ದುಷ್ಟ ಶಕ್ತಿಗಳ ವಿರುದ್ಧ ಟೊಂಕ ಕಟ್ಟಿ ನಿಲ್ಲಬೇಕು’ ಎಂದರು.
ಸುಧಾ ಹುಚಣ್ಣವರ ಮಾತನಾಡಿ ‘ಸಮಾಜಕ್ಕೆ ಬಸವಣ್ಣನವರ ವಿಚಾರ ಆಧಾರಸ್ತಂಭವಾಗಿದೆ. ಮನುಷ್ಯ ಜೀವನಕ್ಕೆ ಬೇಕಾದ ಮೌಲ್ಯಗಳನ್ನು ಅವರು ನೀಡಿದ್ದಾರೆ. ಅವರ ಕುರಿತು ಅವಹೇಳನಕಾರಿ, ಆಧಾರ ರಹಿತ, ದಿಕ್ಕು ತಪ್ಪಿಸುವ ವಿಚಾರಗಳನ್ನು ಪ್ರೋತ್ಸಾಹಿಸುವುದು ಸರಿಯಲ್ಲ. ಬಸವಪರ ಚಿಂತಕರು ಈ ದೇಶದ್ರೋಹಿ, ವಿಚಾರದ್ರೋಹಿಗಳ ವಿರುದ್ಧ ಪ್ರತಿಭಟಿಸಬೇಕು’ ಎಂದರು.
‘ಇನ್ನೂ ಜೀವಂತವಾಗಿರುವ ಅಸ್ಪಶ್ಯತಾಚರಣೆ ಅಳಿಯಬೇಕು. ಬಸವ ಅನುಯಾಯಿಗಳ ಸಂಘಟನೆ ಮನೆಯಿಂದಲೇ ಆರಂಭವಾಗಬೇಕು. ದಲಿತರು ಬಸವ ತತ್ವ ಪಾಲಿಸಿದಂತೆ ಲಿಂಗಾಯತರು ಅಂಬೇಡ್ಕರ್ ತತ್ವ ಪಾಲಿಸಬೇಕು. ಈ ಮೂಲಕ ಬುದ್ಧ, ಬಸವ, ಅಂಬೇಡ್ಕರ್ ಒಂದು ವರ್ಗಕ್ಕೆ ಸೀಮಿತರಲ್ಲ ಎಂಬುದನ್ನು ಎತ್ತಹಿಡಿಯಬೇಕು’ ಎಂದರು
‘ಬಸವಾದಿ ಶಿವಶರಣರ ಹಿಂದೂ ಸಮಾವೇಶ ಮತ್ತು ವಚನ ದರ್ಶನ ಪುಸಕ್ತದ ಮೂಲಕ ಬಸವಣ್ಣನವರ ತತ್ವ ತಿರುಚಲು ಯತ್ನಿಸಿದ ಕೆಲ ಲಿಂಗಾಯತರೇ ಈಗ ರವಿ ಹಂಜ್ ವಿರುದ್ಧ ಪ್ರತಿಭಟಿಸುತ್ತಿರುವುದು ವಿರೋಧಾಭಾಸ’ ಎಂದು ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
‘ಜಾತಿವಾದಿ ಶಕ್ತಿಗಳಿಗೆ ಬಲಿಯಾಗಿ ರವಿ ಹಂಜ್, ಸಮಾನತೆಯ ಹರಿಕಾರ ಬಸವಣ್ಣನವರನ್ನು ನಿಂದಿಸಿದ್ದಾರೆ. ಈ ಕುರಿತು ಅಂಕಣ ಪ್ರಕಟಿಸಿದ ಪತ್ರಿಕೆ ಮತ್ತು ಅದರ ಸಂಪಾದಕರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಸಾಂಸ್ಕೃತಿಕ ದಾಳಿ ತಪ್ಪಿಸಲು ಇವರಿಗೆ ಕಠೋರ ಶಿಕ್ಷೆ ವಿಧಿಸಬೇಕು’ ಎಂದರು.
‘ವರ್ಣ ವ್ಯವಸ್ಥೆ ಪ್ರತಿಪಾದಿಸುವ, ಸಂವಿಧಾನ ಬದಲಿಸುವ ಶಕ್ತಿಗಳು ಈ ವ್ಯಕ್ತಿಗಳ ಹಿಂದೆ ಕೆಲಸ ಮಾಡುತ್ತಿವೆ’ ಎಂದರು.
‘ಬಸವಾದಿ ಶಿವಶರಣರ ಮೌಲ್ಯ ಹಾಳು ಮಾಡುವಂತಹ ಸಮಾವೇಶ ಆಯೋಜನೆ, ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಹೋರಾಟ ಹತ್ತಿಕ್ಕಲು ಯತ್ನಿಸಿದವರೇ ಈಗ ರವಿ ಹಂಜ್ ವಿರುದ್ಧದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಪುರೋಹಿತಶಾಹಿ ಪ್ರವೃತ್ತಿಯಿಂದ ಬಸವತತ್ವ ಪ್ರಸಾರ ಮಾಡುವವರ ಚಾರಿತ್ರ್ಯ ಹನನ ಮಾಡುತ್ತಿದ್ದಾರೆ’ ಎಂದರು.
ಕೃಷ್ಣ ಪರಾಪೂರ ಮಾತನಾಡಿದರು. ಬೇಲೂರಿನ ಬಸವಪ್ರಭು ಮಹಾಂತ ಸ್ವಾಮೀಜಿ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಉಮೇಶ ಪುರದ, ಕೆ.ಎಸ್. ಚಟ್ಟಿ, ಮುತ್ತು ಬಿಳೆಯಲಿ, ಶರೀಫ ಬಿಳೆಯಲಿ, ಬಸವರಾಜ, ಎಸ್.ಎಸ್ ಪಟ್ಟಣಶೆಟ್ಟಿ, ಬಸವರಾಜ ಹಿಡೇಹಡಲಿ, ಪ್ರಕಾಶ ಅಸುಂಡಿ, ಶೇಖಣ್ಣ ಕವಳಿಕಾಯಿ, ಗೌರಕ್ಕ ಬಡಿಗಣ್ಣವರ, ರೇಣುಕಾ ಕರೇಗೌಡ್ರ, ಗಿರಿಜಕ್ಕ ಧರ್ಮರೆಡ್ಡಿ ಇದ್ದರು.






