ಸಿಎಂ ಆಡಳಿತದ ಅವಧಿಗಿಂತ ಗುಣಮಟ್ಟದ ಬಗ್ಗೆ ಚರ್ಚೆಯಾಗಬೇಕು : ಬಸವರಾಜ ಬೊಮ್ಮಾಯಿ

ಗದಗ : ‘ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕಾರ ಅವಧಿಯ ಕುರಿತ ಚರ್ಚೆಗಿಂತ ಅವರು ನೀಡುತ್ತಿರುವ ಆಡಳಿತದ ಗುಣಮಟ್ಟದ ಬಗ್ಗೆ ಚರ್ಚೆಯಾಗಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಗಳವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅತ್ಯಂತ ಸುದೀರ್ಘ ಅವಧಿಗೆ ಸಿಎಂ ಆಗಿ ಕೆಲಸ ಮಾಡಿದ್ದಾರೆಂದು ಕೆಲವರು ಮಾಡುತ್ತಿದ್ದಾರೆ. ಎಷ್ಟು ದಿನ ಮುಖ್ಯಮಂತ್ರಿ ಆಗಿದ್ದೀರಿ ಎನ್ನುವುದಕ್ಕಿಂತ ಅಷ್ಟು ದಿನಗಳಲ್ಲಿ ಏನು ಸಾಧನೆ ಮಾಡಿದ್ದೀರಿ ಎನ್ನುವುದು ಮುಖ್ಯ ಚರ್ಚೆ ಆಗಬೇಕಿದೆ ಎಂದು ಹೇಳಿದರು.
ಕಪ್ಪು ಚುಕ್ಕೆ: ಬೀದರ್, ಬಳ್ಳಾರಿಯಲ್ಲಿ ಆಗುತ್ತಿರುವ ಬೆಳವಣಿಗೆ ಸರಿಯಾದುದಲ್ಲ, ಜನಪ್ರತಿನಿಧಿಗಳಿಗೆ ಶೋಭೆ ತರುವಂತಹದ್ದಲ್ಲಾ, ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ಇರುವುದು ಸಾಮಾನ್ಯ ಅದನ್ನು ಗೌರವಯುತ ಚೌಕಟ್ಟಿನಲ್ಲಿ ಮಾಡಬೇಕು. ಅದನ್ನು ಬಿಟ್ಟು ಮಾಡುವುದು ಒಳ್ಳೆಯದಲ್ಲ. ಬಳ್ಳಾರಿ ಘಟನೆ ಕ್ರಿಮಿನಲ್ ಕೃತ್ಯ. ಈಗಾಗಲೇ ಯಾರಿಂದ ಗುಂಡು ತಗುಲಿದೆ ಎನ್ನುವುದು ಗೊತ್ತಾಗಿದೆ. ಅವನು ಯಾರ ಪ್ರೇರಣೆಯಿಂದ ಗುಂಡು ಹಾರಿಸಿದ ಎನ್ನುವುದನ್ನು ತಿಳಿದು ಅವನನ್ನು ಬಂಧಿಸುವುದು ಮುಖ್ಯ ಎಂದರು.
ಮುಚ್ಚಿ ಹಾಕುವ ಪ್ರಯತ್ನ: ಕಾಂಗ್ರೆಸ್ ಕಾರ್ಯಕರ್ತನ ಮೃತದೇಹವನ್ನು ಎರಡು ಬಾರಿ ಮರಣೋತ್ತರ ಪರೀಕ್ಷೆ ಆರೋಪವಿದ್ದು, ಅಲ್ಲಿ ನಡೆದಿರುವ ಘಟನೆ, ಘಟನೆ ನಡೆದಾಗ ಪೊಲಿಸರು ನಡೆದುಕೊಂಡ ರೀತಿ ಅಲ್ಲಿ ಸಿಕ್ಕಿರುವ ಬುಲೆಟ್‍ಗಳನ್ನು ನೋಡಿದಾಗ, ಆ ಮೇಲೆ ತನಿಖೆ ಯಾವ ರೀತಿ ಮಾಡುತ್ತಿದ್ದಾರೆ ಎನ್ನುವುದನ್ನು ನೋಡಿದಾಗ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ದೂರಿದರು.







