ಬಂದೂಕು ತರಬೇತಿ ಪ್ರಕರಣ | ಪ್ರಮೋದ್ ಮುತಾಲಿಕ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ : ಬಸವರಾಜ ಸೂಳಿಬಾವಿ
"ರಾಜ್ಯದಲ್ಲಿ ಗೃಹ ಇಲಾಖೆ ಇದೆಯೋ ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ"

ಗದಗ : ಬಾಗಲಕೋಟೆಯ ಜಮಖಂಡಿಯಲ್ಲಿ ನಡೆದಿದ್ದ ಬಂದೂಕು ತರಬೇತಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಯಾವುದೇ ರೀತಿಯ ತನಿಖೆ ನಡೆಸದಿರುವುದು ದುರಂತ. ಈ ಘಟನೆಯ ಹಿಂದೆ ಯಾರೆಲ್ಲ ಇದ್ದಾರೆ ಎಂದು ಮಾಹಿತಿಯನ್ನು ತೆಗೆದುಕೊಂಡು ಆ ಸಂಘಟನೆಯ ಮೇಲೆ ಕ್ರಮಕೈಗೊಳ್ಳಬೇಕಿತ್ತು. ಆದರೆ ಅದು ಈವರೆಗೆ ಆಗಿಲ್ಲ. ರಾಜ್ಯದಲ್ಲಿ ಗೃಹ ಇಲಾಖೆ ಇದೆಯೋ ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ ಎಂದು ಪ್ರಗತಿಪರ ಹೋರಾಟಗಾರ ಬಸವರಾಜ ಸೂಳಿಬಾವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದಲ್ಲಿ ಪ್ರತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಕೆಲವು ಮತೀಯ ಸಂಘಟನೆಗಳು ಅಮಾಯಕ ಯುವಕರ ತಲೆಗೆ ಮತೀಯ ವಿಚಾರವನ್ನು ತುಂಬುವ ಮೂಲಕ ದುಷ್ಕೃತ್ಯಗಳಿಗೆ ಬಳಸಿಕೊಳ್ಳುವ ಸಾಧ್ಯತೆ ಇದೆ. ಆತ್ಮರಕ್ಷಣೆ ಹೆಸರಿನಲ್ಲಿ ಕೆಲವು ಸಂಘಟನೆ ಶಸ್ತ್ರಾಸ್ತ್ರಗಳ ತರಬೇತಿಯನ್ನು ರಾಜ್ಯದೊಳಗೆ ನೀಡುತ್ತಿದೆ. ಇದನ್ನು ಕೂಡ ಆ ಸಂಘಟನೆಗಳು ಬಹಿರಂಗವಾಗಿ ಹೇಳಿಕೊಳ್ಳುತ್ತಿದೆ. ಜಮಖಂಡಿಯಲ್ಲಿ186 ಮಂದಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ಫೊಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಕುರಿತು ರಾಜ್ಯ ಸರಕಾರ ಎಫ್‌ಐಆರ್ ದಾಖಲಿಸಿದೆಯಾದರೂ ಅದು ಕೂಡ ಕೇವಲ ನಾಮಕಾವಸ್ಥೆ ಮತ್ತು ಹಲವು ದೋಷಗಳಿಂದ ಕೂಡಿದೆ" ಎಂದು ಆರೋಪಿಸಿದರು.
ʼಘಟನೆಗೆ ಸಂಬಂಧಿಸಿದಂತೆ ಯಾರ ಮೇಲೆ ಎಫ್‌ಐಆರ್ ದಾಖಲಾಗಿಯೋ ಅವರ ಮಾಹಿತಿ ಕೂಡ ಸರಿಯಾಗಿ ಇಲ್ಲ. 27 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದರಲ್ಲಿ 7 ಮಂದಿ ಗದಗದವರು ಇದ್ದಾರೆ. ಬಂದೂಕು ತರಬೇತಿಯಂತಹ ಕೆಲಸದ ಮೂಲಕ ಭಯವನ್ನು ಹುಟ್ಟುಹಾಕುವ ಕೆಲಸ ನಡೆಯುತ್ತಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ ರಾಜ್ಯ ಸರಕಾರ ಗೃಹ ಇಲಾಖೆ ಏನು ಮಾಡುತ್ತಿದೆʼ ಎಂದು ಅವರು ಪ್ರಶ್ನಿಸಿದರು.
ʼಬಂದೂಕು ತರಬೇತಿಯ ಕುರಿತು ಪೊಲೀಸರಿಗೆ ಮಾಹಿತಿ ಇದೆಯೇ? ಶಸ್ತ್ರಾಸ್ತ್ರ ಹೇಗೆ ಬಂದವು? ಅದನ್ನು ಸಂಗ್ರಹಿಸಿಟ್ಟುಕೊಂಡವರು ಯಾರು? ಇಂತಹ ಮಾಹಿತಿ ಈಗಾಗಲೇ ದಾಖಲಾಗಿರುವ ಎಫ್‌ಐಆರ್ ನಲ್ಲಿ ಇಲ್ಲ. ಪೊಲೀಸ್ ಇಲಾಖೆ ಈ ಬಗ್ಗೆ ತನಿಖೆ ಮಾಡಬೇಕು. ಇಂತಹ ಕೃತ್ಯ ಎಸಗಿರುವ ಸಂಘಟನೆಗಳನ್ನು ಸಮಾಜದೊಳಗೆ ಅರಾಜಕತೆಯಲ್ಲಿ ತೊಡಗಿಸಿಕೊಂಡಿರುವಂತಹ ಸಂಘಟನೆ ಎಂದು ಗುರುತಿಸಿ ಕ್ರಮ ಕೈಗೊಳ್ಳಬೇಕು. ಅಂತಹ ಸಂಘಟನೆಗಳನ್ನು ನಿಷೇಧಿಸುವ ಕೆಲಸಗಳು ಆಗಬೇಕುʼ ಎಂದು ಒತ್ತಾಯಿಸಿದರು.
ʼಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಕೂಡಲೇ ಇಂತಹ ಸಂಘಟನೆಗಳ ಮೇಲೆ ಕ್ರಮಕೈಗೊಳ್ಳಬೇಕು. ಶ್ರೀರಾಮಸೇನೆಯ ಗಂಗಾಧರ ಕುಲಕರ್ಣಿ. ಪ್ರಮೋದ್ ಮುತಾಲಿಕ್ ವಿರುದ್ದ ಯಾವ ಕ್ರಮ ಕೈಗೊಂಡಿದ್ದಾರೆ. ಇಂತಹ ಕೃತ್ಯದ ಆಧಾರದ ಮೇಲೆ ಪ್ರಮೋದ್ ಮುತಾಲಿಕ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಶ್ರೀರಾಮಸೇನೆಯನ್ನು ನಿಷೇಧಿಸುವಂತಹ ಕೆಲಸಗಳಾಗಬೇಕುʼ ಎಂದು ಹೇಳಿದರು.
ʼಬಂದೂಕು ತರಬೇತಿಯಂತಹ ಕೃತ್ಯಗಳನ್ನು ತಡೆಯಲು ಟಾಸ್ಕ್‌ಫೋರ್ಸ್ ರಚನೆಯಾಗಬೇಕು. ಅಕ್ರಮ ಶಸ್ತ್ರಾಸ್ತ್ರಗಳನ್ನು ಜಪ್ತಿಮಾಡುವಂತಹ ಕೆಲಸವಾಗಬೇಕು. ಶಸ್ತ್ರಾಸ್ತ್ರ ಸಂಗ್ರಹ ಎಂಬುದು ರಾಜ್ಯದ ಆಂತರಿಕ ಭದ್ರತೆಯ ಸಮಸ್ಯೆಯಾಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಶ್ರೀರಾಮಸೇನೆ ಸಂಘಟನೆಯ ಮಲೆ ಕ್ರಮಕೈಗೊಳ್ಳಬೇಕುʼ ಎಂದು ಆಗ್ರಹಿಸಿದರು.