ಗದಗ: 22 ಗಂಟೆಗಳ ಕಾಲ ಡಿಜಿಟಲ್ ಬಂಧನಕ್ಕೊಳಗಾದ ವೈದ್ಯ!

ಗದಗ: ವಂಚಕರ ತಂಡವೊಂದು ಗದಗ ಜಿಲ್ಲೆಯ ಮುಳಗುಂದ ಪಟ್ಟಣದ ಖಾಸಗಿ ವೈದ್ಯ ಡಾ. ಎಸ್.ಸಿ ಚವಡಿ ಅವರಿಗೆ ವಿಡಿಯೋ ಕರೆ ಮಾಡಿ ನಿರಂತರ 22 ಘಂಟೆಗಳ ಡಿಜಿಟಲ್ ಬಂಧನಕ್ಕೊಳಪಡಿಸಿದರೂ ಹಣ ಪಡೆಯುವಲ್ಲಿ ವಿಫಲವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ʼನ್ಯಾಷನಲ್ ಇನವೆಸ್ಟಿಗೇಶನ್ ಆಥಾರಿಟಿ ಆಫ್ ಇಂಡಿಯಾʼ ಹೆಸರಲ್ಲಿ ದಿ. 11ರಂದು 3ಘಂಟೆ 7 ನಿಮಿಷಕ್ಕೆ ವೈದ್ಯ ಚವಡಿಯವರಿಗೆ ಮೊದಲ ಕರೆ ಮಾಡಿ, ನೀವು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೆನರಾ ಬ್ಯಾಂಕ್ ನಲ್ಲಿ ಅಪಾರ ಪ್ರಮಾಣದ ಹಣ ದುರ್ಬಳಕೆ ಮಾಡಿದ್ದೀರಿ. ನಿಮ್ಮ ಹೆಸರಿನಲ್ಲಿ ಮುಂಬೈನ ಕಲೋಬಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ನಿಮ್ಮನ್ನು ವಿಡಿಯೋ ಕರೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಆದರೆ ಕೆನರಾ ಬ್ಯಾಂಕ್ ನಲ್ಲಿ ಡಾ. ಚವಡಿಯವರ ಖಾತೆ ಇಲ್ಲ. ಅಲ್ಲದೇ ಇವರ ಖಾತೆ ಹಾಗೂ ಎಟಿಎಂ ಕಾರ್ಡ್ ಇವರ ಅರೆಸ್ಟ್ ವಾರಂಟ್ ಹೆಸರಿನಲ್ಲಿ ತಯಾರಿಸಲಾಗಿದೆ. ಅಲ್ಲದೇ ನಿಮ್ಮ ಹೆಸರಿನಲ್ಲಿರಬಹುದಾದ ಎಲ್ಲ ಹಣದ ದಾಖಲೆ ಹಾಗೂ ಆಸ್ತಿ ದಾಖಲೆಗಳನ್ನು ತಗೆದಿಟ್ಟುಕೊಳ್ಳಿ ಎಂದು ಹೇಳಿದ್ದಾರೆ. ಜೊತೆಗೆ ಮುಳಗುಂದದ ಒಬ್ಬ ಪೊಲೀಸ್ ಸಿಬ್ಬಂದಿ ಹೆಸರು ಹಾಗೂ ಫೋಟೋ ತೋರಿಸಿದ್ದಾರೆ.
ನಂತರ ವಿಚಾರಣೆಗೆ ಮೊದಲು ವಿಜಯಕುಮಾರ ಎನ್ನುವ ವ್ಯಕ್ತಿಯೊಬ್ಬ ಇನಸ್ಪೆಕ್ಟರ್ ಎಂದು ಹೇಳಿಕೊಂಡು ಎಲ್ಲ ವಿಚಾರಣೆ ನಡೆಸಿ ನೀವು ವಯಸ್ಸಾದವರು ನಿಮ್ಮನ್ನು ಇಲ್ಲಿಗೆ ಕರೆಸಿ ವಿಚಾರಣೆ ಮಾಡುವದು ಅಷ್ಟು ಸರಿ ಇಲ್ಲ. ಹೀಗಾಗಿ ವಿಡಿಯೋ ಕರೆಯಲ್ಲಿ ವಿಚಾರಣೆ ಮಾಡುತ್ತಿದ್ದೇವೆ. ಮುಂದೆ ಡಿಸಿಪಿ ನಿಮ್ಮ ಜೊತೆ ವಿಚಾರಣೆ ಮಾಡುವರು ಅವರೊಂದಿಗೆ ನಯ ವಿನಯದೊಂದಿಗೆ ನಡೆದುಕೊಳ್ಳಿ ಎಂದು ಹೇಳಲಾಯಿತು.
ಅಲ್ಲದೇ ನರೇಶ ಗೋಯಲ್ ಹಾಗೂ ಅವರ ಗ್ಯಾಂಗನವರು ನಿಮ್ಮನ್ನು ಹಿಂಬಾಲಿಸುತ್ತಿದ್ದಾರೆ. ನೀವು ಈ ವಿಷಯವನ್ನು ಯಾರಿಗೂ ತಿಳಿಸಬೇಡಿ ಮನೆಯಲ್ಲಿ ನಿಮ್ಮ ಮನೆಯವರೊಂದಿಗೆ ಸಂಶಯ ಬರದಂತೆ ನಡೆದುಕೊಳ್ಳಿ, ಅವರು ನಿಮ್ಮನ್ನು ಕೊಲೆ ಮಾಡಲು ಹಿಂಬಾಲಿಸುತ್ತಿದ್ದಾರೆ ನಿಮ್ಮ ಮನೆಯ ಸುತ್ತಮುತ್ತಲು ಇರಬಹುದು. ಹೀಗಾಗಿ ಗೌಪ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ನಂತರ ಮರುದಿನ ಮಧ್ಯಾಹ್ನ 12 ಘಂಟೆಗೆ ಡಿಸಿಪಿ ದಯಾನಾಯಕ ವಿಚಾರಣೆ ಮಾಡಲು ಪ್ರಾರಂಭಿಸಿದರು. ಅವರು ಮಾತನಾಡಿ ನಾವು ವಿಚಾರಣೆ ಮಾತ್ರ ಮಾಡುತ್ತೇವೆ ನಂತರ ಸುಪ್ರಿಂ ಕೋರ್ಟಿಗೆ ಪ್ರಕರಣ ದಾಖಲಿಸುತ್ತೇವೆ. ಅಲ್ಲಿ ನಿಮ್ಮ ಮಾಹಿತಿ ಒದಗಿಸಲಾಗುತ್ತದೆ. ಆಗ ನೀವು ವಕೀಲರನ್ನು ನೇಮಕ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಮುಂದೆ ಪಟ್ಟಣದಲ್ಲಿ ಡಾ. ರೂಮಿನಲ್ಲಿ ಬಂಧಿಯಾಗಿದ್ದಾರೆ ಎಂಬ ಸುದ್ದಿ ತಿಳಿದು ಊರಿನ ಗುಂಪೊಂದು ಮನೆಗೆ ಪೊಲೀಸರೊಂದಿಗೆ ಧಾವಿಸಿ ಬಂದು ಬಾಗಿಲು ಮುರಿಯುವ ಪ್ರಯತ್ನ ಮಾಡಿದಾಗ ಬಾಗಿಲು ತೆರೆದಿದ್ದಾರೆ. ನಂತರ ಮುಳಗುಂದ ಸಿಪಿೈ ಸಂಗಮೇಶ ಶಿವಯೋಗಿ ವಿಡಿಯೋ ಕಾಲ್‌ನಲ್ಲಿ ಮಾತನಾಡಲು ಪ್ರಾರಂಭಿಸಿದಾಗ ವಂಚಕರು ವಿಡಿಯೋ ಕಾಲ್ ಕಟ್ ಮಾಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಗದಗ ಸೈಬರ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಮುಂದಿನ ತನಿಖೆ ಪೊಲೀಸರು ಕೈಗೊಂಡಿದ್ದಾರೆ.
ಈ ಪ್ರಕರಣ ಕುರಿತು ಈಗಾಗಲೇ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇತ್ತೀಚೆಗೆ ಸೈಬರ್ ಪ್ರಕರಣಗಳು ಹೆಚ್ಚಾಗಿದ್ದು, ಇವುಗಳು ಮೋಸದ ಪ್ರಕರಣಗಳಾಗಿದ್ದು, ಸಾರ್ವಜನಿಕರು ಇದರ ಬಗ್ಗೆ ಭಯ ಬೀಳದೇ ಮುಕ್ತವಾಗಿ ಪೊಲೀಸ್ ಠಾಣೆಗೆ ವಿಷಯ ತಿಳಿಸಿ. ಇಂತಹ ಪ್ರಕರಣದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನ ಯಾರೊಂದಿಗೂ ಹಂಚಿಕೊಳ್ಳಬಾರದು.
- ಸಂಗಮೇಶ ಶಿವಯೋಗಿ, ಸಿಪಿಐ ಮುಳಗುಂದ.