ಮೌಲ್ಯಾಧಾರಿತ ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ : ಸ್ಪೀಕರ್ ಯು.ಟಿ. ಖಾದರ್

ಗದಗ: ಬರಹಗಾರರು ಸಮಾಜ ಕಟ್ಟುವ ಕೆಲಸ ಮಾಡಬೇಕೇ ವಿನಃ ಒಡೆಯುವ ಕೆಲಸ ಮಾಡಬಾರದು. ಜನಪ್ರತಿನಿಧಿಗಳಿಂದ ಸಮಾಜದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಮಕ್ಕಳಿಗೆ ಮೌಲ್ಯಾದಾರಿತ ಶಿಕ್ಷಣ ನೀಡುವುದರಿಂದ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಸ್ಪೀಕರ್ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಮುಸ್ಲಿಮ್ ಲೇಖಕರ ಸಂಘವು ದಿವಂಗತ ಯು.ಟಿ. ಫರೀದ್ ಸ್ಮರಣಾರ್ಥ ಕೊಡಮಾಡುವ 2024ನೇ ಸಾಲಿನ ರಾಜ್ಯ ಮಟ್ಟದ ’ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಯನ್ನು ಗಜೇಂದ್ರಗಡದ ಜಗದ್ಗುರು ತೋಂಟದಾರ್ಯ ಸಿಬಿಎಸ್‌ಇ ಶಾಲಾ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅವರು ಪ್ರದಾನಗೈದು ಮಾತನಾಡಿದರು.
ಡಾ. ಐ.ಜೆ. ಮ್ಯಾಗೇರಿ (ಕೃತಿ: ಜೈಲ್ ಡೈರಿ) ಪ್ರಶಸ್ತಿಯನ್ನು ಸ್ವೀಕರಿಸಿದರು. ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಐ.ಜೆ. ಮ್ಯಾಗೇರಿಯ ಪತ್ನಿ ಫರೀದಾ ಬೇಗಂ ಡಾಲಾಯತ್, ಗಜೇಂದ್ರಗಡದ ಅಂಜುಮನ್ ಇಸ್ಲಾಮ್ ಕಮಿಟಿ ಅಧ್ಯಕ್ಷ ಹಸನಸಾಬ ತಟಗಾರ, ಹಿರಿಯ ಸಾಹಿತಿ ಬಿ.ವಿ. ಕೆಂಚರೆಡ್ಡಿ, ಗಜೇಂದ್ರಗಡ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎ.ಪಿ. ಗಾಣಗೇರ, ಯೂಸುಫ್ ಗೋಡೆಕಾರ ಉಪಸ್ಥಿತರಿದ್ದರು.
ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಯಾಕೂಬ್ ಕಲ್ಲರ್ಪೆ ಮತ್ತು ಹುಸೈನ್ ಕಾಟಿಪಳ್ಳ ಉಪಸ್ಥಿತರಿದ್ದರು.
ಕನ್ನಡ ಮತ್ತು ಉರ್ದು ಕವಿಗೋಷ್ಠಿಯಲ್ಲಿ ಕವಿಗಳಾದ ಎ.ಎಸ್. ಮಕಾನದಾರ, ಡಾ. ಹಸೀನಾ ಖಾದ್ರಿ, ಶಿಲ್ಪಾಮ್ಯಾಗೇರಿ, ಮುಹಮ್ಮದ್ ಅರ್ಶದ್ ಹಿರೇಹಾಳ, ಮುರ್ತುಜಾ ಬೇಗಂ ಕೊಡಗಲಿ, ಅನ್ವರ್ ಅಹ್ಮದ್ ವಣಗೇರಿ, ಖಾಝಿ ಶಬ್ಬೀರ್ ಅಹ್ಮದ್ ಶಬ್ಬೀರ್ ಮನ್ಸೂರಿ ಕವನ ವಾಚಿಸಿದರು.
ಮುಸ್ಲಿಮ್ ಲೇಖಕರ ಸಂಘದ ಕಾರ್ಯದರ್ಶಿ ಸಲೀಂ ಬೋಳಂಗಡಿ ಸ್ತುತಿಗೀತೆ ಹಾಡಿದರು. ಕಾರ್ಯಕಾರಿ ಸಮಿತಿ ಸದಸ್ಯ ಎ.ಕೆ. ಕುಕ್ಕಿಲ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಬಿ.ಎ. ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಅಧ್ಯಕ್ಷ ಎ. ಸಈದ್ ಇಸ್ಮಾಯಿಲ್ ವಂದಿಸಿದರು.







