ಗದಗ | ಹೆಡ್ ಲೈಟ್ ಹಠಾತ್ ಆಫ್: ಕತ್ತಲಲ್ಲೇ ಸಂಚರಿಸಿದ ಕೆಎಸ್ಸಾರ್ಟಿಸಿ ಬಸ್!

ಗದಗ: ರಾತ್ರಿ ಚಾಲನೆಯ ವೇಳೆ ಹೆಡ್ ಲೈಟ್ ಹಠಾತ್ ಆಗಿ ಆಫ್ ಆಗಿದ್ದರಿಂದ ಕತ್ತಲಲ್ಲೇ ಪ್ರಯಾಣಿಕರಿದ್ದ ಸರಕಾರಿ ಬಸ್ ಸಂಚರಿಸಿದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.
ಕೆಎ22 ಎಫ್ 1932 ನಂಬರ್ ನ ಬಸ್ ಬೆಟಗೇರಿ ಡಿಪೋಗೆ ಸೇರಿದ್ದು ಎನ್ನಲಾಗಿದ್ದು, ಗಜೇಂದ್ರಗಡ ಪಟ್ಟಣದಿಂದ ಗದಗಕ್ಕೆ ಸೋಮವಾರ ರಾತ್ರಿಯ ಸರ್ವೀಸ್ ವೇಳೆ ಈ ಘಟನೆ ಸಂಭವಿಸಿದೆ. ಬಸ್ ಮುಂದೆ ಸಾಗುತ್ತಿದ್ದಂತೆ ಅಚಾನಕ್ಕಾಗಿ ಅದರ ಹೆಡ್ ಲೈಟ್ ಗಳು ಬೆಳಕು ಚೆಲ್ಲುವುದನ್ನು ನಿಲ್ಲಿಸಿದವು. ಈ ಹಿನ್ನೆಲೆಯಲ್ಲಿ ಚಾಲಕ ನರೆಗಲ್ ಪಟ್ಟಣದಿಂದ ಬೆಟಗೇರಿ ಡೀಪೊವರೆಗೆ ಕತ್ತಲಲ್ಲೇ ಚಾಲನೆ ಮಾಡಿಕೊಂಡು ಬಂದಿದ್ದಾನೆ ಎನ್ನುತ್ತಾರೆ ಪ್ರಯಾಣಿಕರು.
ಗದಗ-ಗಜೇಂದ್ರಗಡ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿದ್ದರಿಂದ ಈ ರಸ್ತೆಯಲ್ಲಿ ಸಾಕಷ್ಟು ವಾಹನಗಳು ಸಂಚರಿಸುತ್ತವೆ. ಸಾರ್ವಜನಿಕ ಬಸ್ ಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದರಿಂದ ಈ ಸಮಸ್ಯೆ ಆಗಿದೆ. ಪ್ರಯಾಣಿಕರ ಪ್ರಾಣದ ಜೊತೆ ಸಾರಿಗೆ ಸಂಸ್ಥೆ ಚೆಲ್ಲಾಟವಾಡುವುದು ಎಷ್ಟರ ಮಟ್ಟಿಗೆ ಸರಿ. ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸಿದಂತಾಯಿತು ಎಂದು ಬಸ್ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.