Gadag | ಬಸವಾದಿ ಶರಣರ ಹೆಸರಿನಲ್ಲಿ ಹಿಂದೂ ಸಮಾವೇಶ : ಬಸವಪರ ಸಂಘಟನೆಗಳ ಖಂಡನೆ

ಗದಗ : ನಗರದ ಬಸವದಳದ ಬಸವ ಮಂಟಪದಲ್ಲಿ ರವಿವಾರ ನಡೆದ ಬಸವಪರ ಹಾಗೂ ಪ್ರಗತಿಪರ ಸಂಘಟನೆಗಳ ಸಭೆಯಲ್ಲಿ, ಬಸವಾದಿ ಶರಣರ ಹೆಸರಿನಲ್ಲಿ ಆಯೋಜಿಸಲಾಗಿರುವ ಹಿಂದೂ ಸಮಾವೇಶವನ್ನು ತೀವ್ರವಾಗಿ ಖಂಡಿಸಲಾಯಿತು.
ಸಭೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅನುಯಾಯಿಗಳು ಭಾಗವಹಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ, ಬಸವಣ್ಣ ಹುಟ್ಟಿದ ಈ ನಾಡಿನಲ್ಲಿ ಮನುವಾದಿಗಳು ಬಸವಾದಿ ಶರಣರ ವಚನಗಳನ್ನು ತಿದ್ದಿ, ತಿರುಚುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಜನತೆ ಒಕ್ಕೊರಲಿನಿಂದ ಖಂಡಿಸಬೇಕು ಎಂದು ಹೇಳಿದರು.
ಚಿಂತಕ ಬಸವರಾಜ ಸೂಳಿಭಾವಿ ಮಾತನಾಡಿ, ಹಿಂದೂ ಸಮಾವೇಶಕ್ಕೆ ನಮ್ಮ ವಿರೋಧವಿಲ್ಲ. ಆದರೆ ಬಸವಾದಿ ಶರಣರ ಹೆಸರನ್ನು ಬಳಸಿಕೊಂಡು ರಾಜಕೀಯ ಉದ್ದೇಶಕ್ಕಾಗಿ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಇಲ್ಲಿ ದಲಿತ, ಪ್ರಗತಿಪರ, ಬಸವಾನುಯಾಯಿಗಳು ಸೇರಿದ್ದು, ನಾವೆಲ್ಲ ಒಂದಾಗಿ ಸೇರಿ ಈ ಹಿಂದೂ ಸಮಾವೇಶಕ್ಕೆ ತಕ್ಕ ಉತ್ತರ ನೀಡೋಣ. “ಸಮಾನತೆಗಾಗಿ ನಾವು” ಎಂಬ ವೇದಿಕೆ ಅಡಿಯಲ್ಲಿ ಈ ಕಾರ್ಯಕ್ರಮವನ್ನು ರೂಪಿಸೋಣ ಎಂದರು.
ಸಭೆಯಲ್ಲಿ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಬಸವಾನುಯಾಯಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡು ಬೆಂಬಲ ಸೂಚಿಸಿದರು.
ಮೇ 31ರೊಳಗೆ ಗದಗ ನಗರದ 35 ವಾರ್ಡ್‌ಗಳಲ್ಲಿ ಸಂಚರಿಸಿ ಬಸವಾದಿ ಶರಣರ ನಿಜ ಇತಿಹಾಸ, ಪರಂಪರೆ ಹಾಗೂ ಶರಣ ಧರ್ಮದ ವಿಚಾರಗಳನ್ನು ಜನರಿಗೆ ತಲುಪಿಸುವ ಜೊತೆಗೆ ಹಿಂದೂ ಸಮಾವೇಶದ ಒಳ ಉದ್ದೇಶಗಳ ಬಗ್ಗೆ ಜಾಗೃತಿ ಮೂಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.






