Lakkundi | ಚಿನ್ನದ ನಿಧಿ ಒಪ್ಪಿಸಿದ ಕುಟುಂಬಕ್ಕೆ ನಿವೇಶನ, ನಗದು, ಸರಕಾರಿ ಕೆಲಸ: ಸಚಿವ ಎಚ್.ಕೆ. ಪಾಟೀಲ್ ಘೋಷಣೆ

ಸಚಿವ ಎಚ್.ಕೆ.ಪಾಟೀಲ್
ಗದಗ: ಜಿಲ್ಲೆಯ ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವ ವೇಳೆ ಚಿನ್ನದ ನಿಧಿ ಪತ್ತೆಹಚ್ಚಿ ಪ್ರಾಮಾಣಿಕವಾಗಿ ಸರಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ನಿವೇಶನ, ಮನೆ ನಿರ್ಮಾಣಕ್ಕಾಗಿ 5 ಲಕ್ಷ ರೂ. ನಗದು ಸಹಾಯ ಹಾಗೂ ಪ್ರಜ್ವಲ್ ಅವರ ತಾಯಿ ಕಸ್ತೂರೆವ್ವ ರಿತ್ತಿಗೆ ಹೊರಗುತ್ತಿಗೆ ಆಧಾರದ ಸರಕಾರಿ ಕೆಲಸ ನೀಡಲಾಗುತ್ತದೆ ಎಂದು ಸಚಿವ ಎಚ್.ಕೆ.ಪಾಟೀಲ್ ಘೋಷಣೆ ಮಾಡಿದ್ದಾರೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣದ ಬಳಿಕ ಮಾತನಾಡಿದ ಅವರು, ಪ್ರಜ್ವಲ್ ರಿತ್ತಿ ತೋರಿದ ಪ್ರಾಮಾಣಿಕತೆ ರಾಷ್ಟ್ರಕ್ಕೆ ಮಾದರಿಯಾಗಿದೆ. ಲಕ್ಕುಂಡಿಯ ಗತವೈಭವ ಸಾರುವ ನಿಧಿಯನ್ನು ಅವರು ಸರಕಾರದ ಸೊತ್ತು ಎಂದು ಭಾವಿಸಿ ಒಪ್ಪಿಸಿದ್ದಾರೆ. ಅವರಿಗೆ ಸದ್ಯ ನಿವೇಶನ, ಧನಸಹಾಯ ಹಾಗೂ ತಾಯಿ ಗಂಗಮ್ಮ ಅವರಿಗೆ ಹೊರಗುತ್ತಿಗೆ ಕೆಲಸ ನೀಡಿದ್ದೇವೆ ಎಂದರು.
ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವ ವೇಳೆ ಪತ್ತೆಯಾದ ಬಂಗಾರದ ಪುರಾತನ ಮೌಲ್ಯ ನಿರ್ಧರಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗಿದೆ. ಸಮಿತಿಯ ವರದಿ ಬಂದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದ ಸಚಿವರು, ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.





