ಧ್ವಜಕಂಬಕ್ಕೆ ಕಟ್ಟಿ ಯುವಕರ ಮೇಲೆ ಮಾರಣಾಂತಿಕ ಹಲ್ಲೆ: ಆರೋಪ
ನರಗುಂದದಲ್ಲಿ ತಡವಾಗಿ ಬೆಳಕಿಗೆ ಬಂದ ಘಟನೆ : ದೂರು-ಪ್ರತಿದೂರು ದಾಖಲು

ಸಾಂದರ್ಭಿಕ ಚಿತ್ರ
ಗದಗ : ಬಾಲಕಿಯರ ಮೊಬೈಲ್ಗೆ ಅಶ್ಲೀಲ ಸಂದೇಶ ಕಳಿಸಿದ್ದಾರೆ ಎಂದು ಆರೋಪಿಸಿ ಮೂವರು ಯುವಕರನ್ನು ಧ್ವಜ ಕಂಬಕ್ಕೆ ಕಟ್ಟಿ ಹಲ್ಲೆಗೈದಿರುವ ಘಟನೆ ನರಗುಂದ ತಾಲೂಕಿನ ಓರ್ವ ಹಳ್ಳಿಯಲ್ಲಿ ಮೇ 28ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ನರಗುಂದ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.
ಬಾಲಕಿಯರಿಗೆ ಮೊಬೈಲ್ಗೆ ಅಶ್ಲೀಲ ಸಂದೇಶ ಕಳಿಸಿದ ಆರೋಪದಲ್ಲಿ ಯುವಕರನ್ನು ಬನಹಟ್ಟಿ ಗ್ರಾಪಂ ಕಚೇರಿ ಎದುರಿನ ಧ್ವಜ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಸುಮಾರು ನಾಲ್ಕೈದು ಗಂಟೆಗಳವರೆಗೆ ಮೂವರ ಬಟ್ಟೆ ಹರಿದು ಮೈಮೇಲೆ ರಕ್ತ ಬರುವಂತ ಹಲ್ಲೆ ನಡೆಸಿದ್ದಾರೆ. ಈ ವೇಳೆ ನಾವು ಕೈ ಕಾಲು ಬಿದ್ದು ಬೇಡಿದರೂ ನಿಮಗೂ ಹಲ್ಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಯುವಕರ ಪೋಷಕರು ದೂರಿದ್ದಾರೆ.
ಸುಮಾರು 50ಕ್ಕೂ ಹೆಚ್ಚು ಮಂದಿ ಯುವಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಆದರೆ, ಕೆಲವರನ್ನು ಮಾತ್ರ ಬಂಧನ ಮಾಡಿದ್ದು, ಉಳಿದವರು ತಲೆಮರೆಸಿಕೊಂಡಿದ್ದಾರೆ ಎಂದು ಪೋಷಕರು ದೂರಿದ್ದಾರೆ.
ಹಲ್ಲೆಗೊಳಗಾದವನ ಪೈಕಿ ಓರ್ವ ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೂ ನಡೆದಿತ್ತೆನ್ನಲಾಗಿದೆ. ಬಾಲಕಿಯರ ಮೊಬೈಲ್ಗೆ ಅಶ್ಲೀಲ ಸಂದೇಶ ಕಳಿಸಿದ ಆರೋಪದಲ್ಲಿ ಯುವಕರ ವಿರುದ್ಧವೂ ಪ್ರತಿದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.